Congress ಆಯ್ತು.. ಈಗ BJPಯಲ್ಲಿ ಸಾಮೂಹಿಕ ನಾಯಕತ್ವ ಜಪ
ಬೆಂಗಳೂರು : ರಾಜ್ಯದಲ್ಲಿ 2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ದಿನಗಳು ಹತ್ತಿರವಾಗುತ್ತಿದ್ದಂತೆ ರಾಜಕೀಯ ಪಕ್ಷಗಳಲ್ಲಿ ಬಿರುಸಿನ ಚಟುವಟಿಕೆಗಳು ಆರಂಭವಾಗಿವೆ. ಎಲ್ಲಾ ಪಕ್ಷಗಳು ಈಗಿನಿಂದಲೇ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿವೆ. ಚುನಾವಣೆಯನ್ನು ಯಾವ ರೀತಿ ಎದುರಿಸಬೇಕು..? ಯಾವ ರೀತಿಯ ಸ್ಟ್ರಾಟರ್ಜಿ ಇರಬೇಕು ಎಂಬ ಬಗ್ಗೆ ಪಕ್ಷಗಳಲ್ಲಿ ಚರ್ಚೆ ನಡೆಯುತ್ತಿದೆ.
ಈ ನಡುವೆ ಇಷ್ಟು ದಿನ ನಾವು ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸುತ್ತೇವೆ ಎಂದು ಕಾಂಗ್ರೆಸ್ ಪಕ್ಷ ಹೇಳುತ್ತಿತ್ತು. ಕಾಂಗ್ರೆಸ್ ಪಕ್ಷ ವನ್ನು ಅಧಿಕಾರಕ್ಕೆ ತರುವುದೇ ನಮ್ಮ ಗುರಿ, ನಾವೆಲ್ಲಾ ಒಂದಾಗಿ ಸಾಮೂಹಿಕ ನಾಯಕತ್ವದಲ್ಲಿ ನಾವು ಚುನಾವಣೆ ಎದುರಿಸುತ್ತೇವೆ ಅಂತಾ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಎಲ್ಲಾ ಕಾಂಗ್ರೆಸ್ ನಾಯಕರು ಸ್ಪಷ್ಟಪಡಿಸಿದ್ದಾರೆ.
ಇದೀಗ ಈ ಸಾಮೂಹಿಕ ನಾಯಕತ್ವದ ಜಪ ಬಿಜೆಪಿಯಲ್ಲೂ ಶುರುವಾಗಿದೆ. ಮೊನ್ನೆ ಮೊನ್ನೆವರೆಗೂ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತೇವೆ ಎನ್ನುತ್ತಿದ್ದ ಬಿಜೆಪಿಗರು ಈಗ ಸಾಮೂಹಿಕ ನಾಯಕತ್ವದ ಜಪ ಮಾಡುತ್ತಿದ್ದಾರೆ.
ಇದನ್ನೆ ಸ್ವತಃ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರೇ ಸ್ಪಷ್ಟಪಡಿಸಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಬಿಎಸ್ ವೈ, ಬಿಜೆಪಿ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಲಿದೆ. ಯಾರಿಗೂ ಈ ಬಗ್ಗೆ ಅನುಮಾನ ಬೇಡ. ಮುಂದಿನ ಚುನಾವಣೆಯನ್ನು ಸಾಮೂಹಿಕ ನಾಯಕತ್ವದಲ್ಲಿ ಎದುರಿಸ 150 ಸ್ಥಾನಗಳಲಿ ಗೆದ್ದು ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.