ಬೆಂಗಳೂರು ; ಇನ್ನೊಬ್ಬರ ದೂರವಾಣಿಗಳನ್ನು ಕದ್ದಾಲಿಸುವ ಪರಿಸ್ಥಿತಿ ನಮ್ಮ ಸರ್ಕಾರಕ್ಕೆ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗೆ ಕನ್ನಡ ಮತ್ತು ಸಂಸ್ಕøತಿ ಹಾಗೂ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ತಿರುಗೇಟು ನೀಡಿದ್ದಾರೆ.
ವಿಧಾನಸೌಧದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕಮಾರ್ ಅವರ ದೂರವಾಣಿಯನ್ನು ಕದ್ದಾಲಿಕೆ ಮಾಡುವಂತಹ ಪರಿಸ್ಥಿತಿ ನಮಗೆ ಬಂದಿಲ್ಲ. ಹಿಂದಿನ ಸರ್ಕಾರದ ಅವಧಿಯಲ್ಲಿ ನಾಡಿನ ಪ್ರಮುಖ ಮಠಾಧೀಶರ ದೂರವಾಣಿ ಕರೆಗಳನ್ನು ಕದ್ದಾಲಿಕೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಇನ್ನೊಬ್ಬರ ದೂರವಾಣಿಗಳನ್ನು ಕದ್ದಾಲಿಸುವ ಪರಿಸ್ಥಿತಿ ನಮ್ಮ ಸರ್ಕಾರಕ್ಕೆ ಇಲ್ಲ ಎಂದು ಟಾಂಗ್ ನೀಡಿದರು.
ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ತಾವು ಮಾಡಿದ್ದನ್ನೇ ಬಿಜೆಪಿಯವರು ಮಾಡಬಹುದೆಂಬ ಬ್ರಹ್ಮೆಯಲ್ಲಿದ್ದಾರೆ. ನಮಗೂ ಅವರಿಗೂ ಸಾಕಷ್ಟು ವ್ಯತ್ಯಾಸವಿದೆ. ನಾವು ಯಾರ ಫೋನ್ ಕದ್ದಾಲಿಕೆ ಮಾಡುವುದಿಲ್ಲ ಎಂದು ಸಿ.ಟಿ ರವಿ ಗುಡುಗಿದರು.








