ಕನ್ನಡಕ್ಕಾಗಿ ಬಿಜೆಪಿ ಮಾಡಿದ್ದಷ್ಟು ಕಾಂಗ್ರೆಸ್ ಎಂದಿಗೂ ಮಾಡಿಲ್ಲ : ಬಿಜೆಪಿ BJP saaksha tv
ಬೆಂಗಳೂರು : ಕನ್ನಡಕ್ಕಾಗಿ ಬಿಜೆಪಿ ಸರ್ಕಾರ ಮಾಡಿದ್ದಷ್ಟು ಕಾಂಗ್ರೆಸ್ ಎಂದಿಗೂ ಮಾಡಿಲ್ಲ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಿರುದ್ಧ ರಾಜ್ಯ ಬಿಜೆಪಿ ಕಿಡಿಕಾರಿದೆ.
ಬಿಎಂಆರ್ ಸಿಎಲ್ ಆಗಿಂದಲೂ ಕನ್ನಡಕ್ಕೆ ಅಪಮಾನ ಮಾಡುವ ಕೆಲಸ ಮಾಡುತ್ತಿದೆ. ದುರುದ್ದೇಶದಿಂದಲೇ ಇಂದಿನ ಉದ್ಘಾಟನಾ ಕಾರ್ಯಕ್ರಮದಲ್ಲಿ ಕನ್ನಡ ಕಡೆಗಣಿಸಲಾಗಿದೆ.
ದುರಂತವೆಂದರೆ ಸಿಎಂ ಬಸವರಾಜ ಬೊಮ್ಮಾಯಿ ಯವರಾದರೂ ಕನ್ನಡದ ಭಾಷಾಭಿಮಾನ ತೋರಬೇಕಿತ್ತು. ಆದರೆ ಕೇಂದ್ರದವರನ್ನು ಮೆಚ್ಚಿಸಲು ಕಾರ್ಯಕ್ರಮವನ್ನು ಇಂಗ್ಲೀಷ್‍ಮಯ ಮಾಡಲು ಅವಕಾಶ ಕೊಟ್ಟಿದ್ದಾರೆ ಎಂದು ದಿನೇಶ್ ಗುಂಡೂರಾವ್ ಅವರು ಟ್ವೀಟ್ ಮಾಡಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ರಾಜ್ಯ ಬಿಜೆಪಿ, ಮಾನ್ಯ ದಿನೇಶ್ ಗುಂಡೂರಾವ್ ಅವರೇ, ಬಿಜೆಪಿ ಸರ್ಕಾರವನ್ನು ಟೀಕಿಸಲು ಯೋಗ್ಯ ವಿಷಯವಿಲ್ಲೆವೆಂದು ಇಂತಹ ಕುಚೇಷ್ಟೆ ಮಾಡುವುದು ಸರಿಯಲ್ಲ.
ಒಕ್ಕೂಟ ವ್ಯವಸ್ಥೆಯೊಳಗೆ ರಾಜ್ಯ ಸರ್ಕಾರದ ಸಚಿವರಾಗಿಯೂ ಕೆಲಸ ಮಾಡಿರುವ ನೀವು ಭಾಷಾ ವಿಚಾರದಲ್ಲಿ ರಾಜಕಾರಣ ನಡೆಸುವುದು ಸರಿಯೇ? ಕನ್ನಡಕ್ಕಾಗಿ ಬಿಜೆಪಿ ಸರ್ಕಾರ ಮಾಡಿದ್ದಷ್ಟು ಕಾಂಗ್ರೆಸ್ ಎಂದಿಗೂ ಮಾಡಿಲ್ಲ.
ಕೇಂದ್ರ ಹಾಗೂ ರಾಜ್ಯ ಸರ್ಕಾರ ಹಲವು ಸಂದರ್ಭದಲ್ಲಿ ತ್ರಿಭಾಷಾ ಸೂತ್ರದ ಬಗ್ಗೆ ನಿಲುವು ಸ್ಪಷ್ಟಪಡಿಸಿವೆ. ಕನ್ನಡ ನಮ್ಮ ಅಸ್ಮಿತೆ, ಇದರಲ್ಲಿ ರಾಜೀಯಾಗುವ ಪ್ರಶ್ನೆಯೇ ಇಲ್ಲ.
ಭಾಷೆಯ ವಿಚಾರದಲ್ಲಿ ಬಿಜೆಪಿ ಎಂದಿಗೂ ರಾಜಕೀಯ ಮಾಡುವುದಿಲ್ಲ. ಈ ಹಿಂದೆ ಕೆಪಿಸಿಸಿಯ ವಿಭಾಗೀಯ ಸಮಾವೇಶದಲ್ಲಿ ಕನ್ನಡ ಮಾಯವಾಗಿತ್ತು. ಆಗ ಎಲ್ಲಿದ್ದಿರಿ ಎಂದು ಪ್ರಶ್ನಿಸಿದೆ.