ಕಾಂಗ್ರೆಸ್ ಈಗ ಅವಸಾನದ ಕಾಲದಲ್ಲಿದೆ : ಗೋವಿಂದ ಕಾರಜೋಳ Congress
ಬಾಗಲಕೋಟೆ : ಸಿದ್ದರಾಮಯ್ಯ ಅಷ್ಟೇ ಅಲ್ಲ, ದೇಶದಲ್ಲಿ ಕಾಂಗ್ರೆಸ್ ಕೂಡ ಈಗ ಅವಸಾನದ ಕಾಲದಲ್ಲಿದೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅಭಿಪ್ರಾಯಪಟ್ಟಿದ್ದಾರೆ.
ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೋವಿಂದ ಕಾರಜೋಳ, ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ವಿನಾ ಕಾರಣ ದೇಶದ ಪ್ರಧಾನಿಯನ್ನಾಗಲಿ, ರಾಜ್ಯ ಸರ್ಕಾರವನ್ನಾಗಲಿ ಆರೋಪ ಮಾಡುವುದನ್ನು ಬಿಡಿ.
ಇಂತಹ ಕಠಿಣ ಸಂದರ್ಭದಲ್ಲಿ ಒಳ್ಳೆಯ ಸಲಹೆ ನೀಡಿ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ಇನ್ನು ವಿಪಕ್ಷ ನೀಡುವ ಉತ್ತಮ ಸಲಹೆಯನ್ನ ಅನುಸರಿಸುತ್ತೇವೆ. ಸರ್ಕಾರದ ಎಲ್ಲಾ ಕಾರ್ಯಕ್ರಮ ವಿರೋಧಿಸಿದರೆ ಟೀಕೆಯೇ ವಿಪಕ್ಷದ ಗುರಿ ಎನಿಸುತ್ತದೆ.
ಅನುಭವಿ ರಾಜಕಾರಣಿ ಆಗಿರುವ ಸಿದ್ದರಾಮಯ್ಯ ಒಳ್ಳೆಯ ಸಲಹೆ ನೀಡಲಿ ಎಂದು ಕೇಳುತ್ತೇನೆ ಎಂದರು.
ಇದೇ ವೇಳೆ ಸಿದ್ದರಾಮಯ್ಯ ಹಕ್ಕು ಚ್ಯುತಿ ಮಂಡನೆ ವಿಚಾರವಾಗಿ ಮಾತನಾಡಿ, ಸಿದ್ದರಾಮಯ್ಯಗೆ ಡಿಸಿಗಳ ಜೊತೆ ಸಭೆ ಮಾಡ್ತೀನಿ ಅನ್ನೋ ಹುಚ್ಚು ಯಾಕೆ ಅಂತ ನನಗೆ ಗೊತ್ತಿಲ್ಲ.
ಸಭೆ ನಡೆಸಲು ಅವಕಾಶ ಇಲ್ಲ. ಬೇಕಿದ್ದರೆ ಎಲ್ಲಾ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆಯಲಿ, ತಪ್ಪೇನಿಲ್ಲ. ಮಾಹಿತಿ ಒದಗಿಸಲು ಸೂಚನೆ ಕೊಡುತ್ತೇವೆ ಎಂದರು.