ಗೃಹಸಚಿವ ಜಿ. ಪರಮೇಶ್ವರ್ ಅವರ ಶಿಕ್ಷಣ ಸಂಸ್ಥೆಗಳ ಮೇಲೆ ಇಡಿ (ಎನ್‌ಫೋರ್ಸ್‌ಮೆಂಟ್ ಡಿರೆಕ್ಟರೇಟ್) ದಾಳಿ ನಡೆದ ಬೆನ್ನಲ್ಲೇ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಸ್ಪೋಟಕ ಆರೋಪ ಮಾಡಿದ್ದು, ಇಡಿಗೆ ಮಾಹಿತಿ ನೀಡಿದ್ದು ಬೇರಾರೂ ಅಲ್ಲ, ಕಾಂಗ್ರೆಸ್‌ನೊಳಗಿನ ಒಂದು ಗುಂಪೇ ಎಂದು ಸ್ಫೋಟಕ ಮಾಹಿತಿ ನೀಡಿದ್ದಾರೆ.
ಗದಗ ಜಿಲ್ಲೆಯ ಪ್ರವಾಸದ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಪ್ರಹ್ಲಾದ್ ಜೋಶಿ, ಪರಮೇಶ್ವರ್ ವಿರುದ್ಧ ಕ್ರಮ ಜರುಗಿಸಬೇಕು ಅಂತಲೇ ಕೆಲವು ಕಾಂಗ್ರೆಸ್ ನಾಯಕರು ಸ್ವತಃ ಇಡಿಗೆ ಎಲ್ಲಾ ಮಾಹಿತಿಯನ್ನು ನೀಡಿದ್ದಾರೆ. ಈ ಕುರಿತು ಯಾರು ಮಾಹಿತಿ ಕೊಟ್ಟರು ಎಂಬುವುದು ಸಿದ್ದರಾಮಯ್ಯರಿಗೂ ಗೊತ್ತಿದೆ. ಆದರೆ ಅವರು ಮೌನ ವಹಿಸಿದ್ದಾರೆ ಎಂದು ಗಂಭೀರ ಆರೋಪವನ್ನೂ ಮಾಡಿದ್ದಾರೆ.
ಪ್ರಹ್ಲಾದ್ ಜೋಶಿಯವರು 2013ರ ಚುನಾವಣೆಯ ಹಿನ್ನೆಲೆಯನ್ನೂ ಉಲ್ಲೇಖಿಸಿ, ಇದೇ ಸಿದ್ದರಾಮಯ್ಯ ಪರಮೇಶ್ವರ್ ಅವರನ್ನು ಸೋಲಿಸಿದ್ದರು. ಆ ನಂತರವೂ ಅವರು ಪಕ್ಷದ ಒಗ್ಗಟ್ಟಿಗೆ ಅನೇಕ ಬಾರಿ ಧಕ್ಕೆ ತಂದಿದ್ದಾರೆ. ಇಂತಹ ಆಂತರಿಕ ಅಸಮಾಧಾನದಿಂದಲೇ ಇವತ್ತಿನ ದಾಳಿಯ ಸ್ಥಿತಿ ನಿರ್ಮಾಣವಾಗಿದೆ, ಎಂದು ಕಿಡಿಕಾರಿದರು.
ಇಡೀ ಪ್ರಕರಣಕ್ಕೆ ರಾಜಕೀಯ ವೈಷಮ್ಯ ಮತ್ತು ಪಕ್ಷದ ಒಳಜಗಳ ಬೆರೆಯುತ್ತಿರುವುದು ಸ್ಪಷ್ಟವಾಗಿದೆ. ಬಿಜೆಪಿ ನಾಯಕರು ಈ ದಾಳಿಯಲ್ಲಿ ಅವರ ಪಾಲು ಇಲ್ಲ ಎಂದು ಸ್ಪಷ್ಟಪಡಿಸುತ್ತಿದ್ದರೆ, ಈಗಲೇ ಕಾಂಗ್ರೆಸ್ ಶಿಬಿರದಲ್ಲಿ ಅಸಮಾಧಾನ ಮತ್ತು ಸಂಶಯದ ಬಲೆ ಬಿದ್ದಿರುವಂತಾಗಿದೆ.








