ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಿಂಘ್ವಿ ಮತ್ತು ಅವರ ಪತ್ನಿಗೆ ಕೊರೊನಾ ಸೋಂಕು
ಹೊಸದಿಲ್ಲಿ, ಜೂನ್ 27: ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಿಂಘ್ವಿ ಹಾಗೂ ಅವರ ಪತ್ನಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಕೊರೊನಾ ವೈರಸ್ ದೃಢಪಟ್ಟ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಿರಿಯ ನಾಯಕ, ಸುಪ್ರೀಂಕೋರ್ಟ್ ನ್ಯಾಯವಾದಿ ಅಭಿಷೇಕ್ ಮನು ಸಿಂಘ್ವಿ ಅವರು ಮನೆಯಲ್ಲೇ ಐಸೊಲೇಷನ್ ನಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಿಂಘ್ವಿಗೆ ಸಣ್ಣ ಪ್ರಮಾಣದ ಜ್ವರ ಕಾಣಿಸಿಕೊಂಡಿದ್ದು, ಸೋಂಕಿಗೆ ಗುರಿಯಾಗಿರುವ ಅವರ ಪತ್ನಿ ಸರ್ಕಾರದ ಮಾರ್ಗಸೂಚಿಯಂತೆ ಐಸೊಲೇಷನ್ ನಲ್ಲಿದ್ದಾರೆ. ಸಿಂಘ್ವಿ ಹಾಗೂ ಪತ್ನಿಗೆ ಕೊರೋನಾ ಸೋಂಕು ದೃಢವಾದ ಹಿನ್ನಲೆಯಲ್ಲಿ ಅವರ ಕುಟುಂಬ ಸದಸ್ಯರನ್ನೂ ಸಹ ಪರೀಕ್ಷೆಗೊಳಪಡಿಸಲಾಗಿದೆ. ಜುಲೈ 9 ರವರೆಗೆ ಅವರಿಗೆ ಹೋಂ ಕ್ವಾರಂಟೈನ್ ನಲ್ಲಿರಲು ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ದಿನದಿಂದ ದಿನಕ್ಕೆ ಕೊರೊನಾ ಸೋಂಕು ಪ್ರಕರಣಗಳು ವ್ಯಾಪಕವಾಗಿ ಹರಡುತ್ತಿದ್ದು, ದೇಶದಲ್ಲಿ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ ತೀವ್ರ ಹೆಚ್ಚಿನ ಪ್ರಮಾಣದಲ್ಲಿ ಏರಿಕೆಯಾಗಿದೆ. ಅಭಿಷೇಕ್ ಮನು ಸಿಂಘ್ವಿ, ಕಾಂಗ್ರೆಸ್ ವಕ್ತಾರ ಸಂಜಯ್ ಝಾ ನಂತರ ಕೊರೋನಾ ಸೋಂಕಿಗೆ ಗುರಿಯಾಗಿರುವ ಎರಡನೇ ಕಾಂಗ್ರೆಸ್ ನಾಯಕರಾಗಿದ್ದಾರೆ.