ಕರ್ನಾಟಕದಲ್ಲಿ 150 ಸೀಟ್ ಗಳನ್ನ ಗೆಲ್ಲಲು ಟಾರ್ಗೇಟ್ ನೀಡಿದ ರಾಹುಲ್ ಗಾಂಧಿ
ರಾಜ್ಯ ಕಾಂಗ್ರೆಸ್ ನಾಯಕರಿಗೆ ಮುಂದಿನ ಚುನಾವಣೆಯಲ್ಲಿ 150 ಸೀಟ್ ಗಳನ್ನ ಗೆಲ್ಲುವಂತೆ ರಾಹುಲ್ ಗಾಂಧಿ ಟಾರ್ಗೇಟ್ ನೀಡಿದ್ದಾರೆ. ಕರ್ನಾಟಕ ಪ್ರವಾಸದಲ್ಲಿರುವ ರಾಹುಲ್ ಗಾಂಧಿ “ ನಾವು ಕರ್ನಾಟಕದಲ್ಲಿ ಚುನಾವಣೆಯನ್ನ ಎದುರು ನೋಡುತ್ತಿದ್ದೇವೆ. ನಾವು ಕಡಿಮೆ ಅಂತರದಿಂದ ಗೆಲ್ಲುವ ಗುರಿ ಹೊಂದಬಾರದು. ಮುಂದಿನ ಎಲೆಕ್ಷನ್ನಲ್ಲಿ 150 ಸ್ಥಾನಗಳನ್ನ ಗೆಲ್ಲಲೇಬೇಕು. ಕರ್ನಾಟಕದಲ್ಲಿ 150 ಸ್ಥಾನಗಳನ್ನ ಗೆಲ್ಲುವುದು ಕಷ್ಟವಲ್ಲ ಒಗ್ಗಟ್ಟಾಗಿ, ಸರಿಯಾದ ವಿಚಾರ ಕೈಗೆತ್ತಿಕೊಂಡರೆ ಗೆಲ್ಲಬಹುದು” ಎಂದು ಕಾಂಗ್ರೆಸ್ ಕಾರ್ಯಕಾರಿಣಿಯಲ್ಲಿ ರಾಹುಲ್ ಗಾಂಧಿ ಕರೆಯಿತ್ತರು.
20 ವರ್ಷಗಳ ಹಿಂದೆ ಮಾಡಿದ್ದು ಈಗ ನಡೆಯೋದಿಲ್ಲ. ಪಕ್ಷಕ್ಕೆ ಕೆಲಸ ಮಾಡುವವರನ್ನ ಪಕ್ಷ ರಕ್ಷಣೆ ಮಾಡುತ್ತದೆ. ಕಡಿಮೆ ಅಂತರದಲ್ಲಿ ಗೆಲ್ಲಲು ಎಲೆಕ್ಷನ್ನಲ್ಲಿ ಸ್ಪರ್ಧಿಸಬಾರದು. 150 ಸ್ಥಾನಗಳಲ್ಲಿ ಒಂದೂ ನಂಬರ್ ಕಡಿಮೆಯಾಗಬಾರದು. ನಾವು ನಮ್ಮ ಕಾರ್ಯಕರ್ತರನ್ನ ಮರೆಯಬಾರದು. ಕಾಂಗ್ರೆಸ್ ಸರ್ಕಾರ ಬಂದರೆ ಕಾರ್ಯಕರ್ತರಿಗೆ ಅಧಿಕಾರ ನೀಡುವುದಾಗಿ ಕಾರ್ಯಕಾರಿಣಿಯಲ್ಲಿ ‘ಕೈ’ ನಾಯಕ ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ ಹೇಳಿದರು.
ಕರ್ನಾಟಕದಲ್ಲಿ ಎಂದೂ ಕಾಂಗ್ರೆಸ್ ಸ್ಪಿರಿಟ್ ಇದೆ. ಇದು ಅತ್ಯಂತ ನೈಸರ್ಗಿಕ ಕಾಂಗ್ರೆಸ್ ರಾಜ್ಯ. ಇಲ್ಲಿರುವುದು ಅನೈತಿಕ ಬಿಜೆಪಿ ಸರ್ಕಾರ. ನಾವು ಒಗ್ಗಟ್ಟಾಗಿ ಕೆಲಸ ಮಾಡಿದರೆ, ಸರಿಯಾದ ವಿಚಾರ ಕೈಗೆತ್ತಿಕೊಂಡರೆ ಗೆಲ್ಲಬಹುದು. ನಾವು ನಾಯಕರನ್ನ ಇಷ್ಟ ಕಷ್ಟದ ಆಧಾರ ಮೇಲೆ ಮಣೆ ಹಾಕೋಲ್ಲ. ಯಾರು ಕೆಲಸ ಮಾಡ್ತಾ ಇದಾರೆ ಅನ್ನೋ ಆಧಾರದ ಮೇಲೆ ಕೆಲಸ ಮಾಡ್ತೀವಿ. ನಾವು ಈ ವಿಷಯದಲ್ಲಿ ಕಟ್ಟರ್ ಆಗಿದ್ದೇವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.








