ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ ಕಾಂಗ್ರೆಸ್ ಶಾಸಕ ಪಾರು
ಧಾರ್ಚುಲಾ, ಜುಲೈ 31: ಪಿಥೋರಗ ಜಿಲ್ಲೆಯ ಧಾರ್ಚುಲಾ ಪ್ರದೇಶದಲ್ಲಿ ಗುರುವಾರ ಪ್ರವಾಹದ ನೀರಿನಲ್ಲಿ ಕೊಚ್ಚಿಹೋಗುತ್ತಿದ್ದ ಉತ್ತರಾಖಂಡ ಕಾಂಗ್ರೆಸ್ ಶಾಸಕ ಹರೀಶ್ ಧಮಿ ಅವರನ್ನು ರಕ್ಷಿಸಲಾಗಿದೆ. ನೀರಿನಲ್ಲಿ ಭಗ್ನಾವಶೇಷ ತುಂಬಿದ್ದ ಕಾರಣದಿಂದಾಗಿ ಧಾರ್ಚುಲಾದ ಶಾಸಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅವರ ಜೊತೆಯಲ್ಲಿದ್ದವರು ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ ಶಾಸಕರನ್ನು ಪಾರುಮಾಡುವಲ್ಲಿ ಯಶಸ್ವಿಯಾದರು.
ಭಾರಿ ಮಳೆ ಪೀಡಿತ ಲುಮ್ತಿ ಮತ್ತು ಮೋರಿ ಗ್ರಾಮಕ್ಕೆ ನಾನು ಭೇಟಿ ಕೊಟ್ಟಿದ್ದೆ. ಹಿಂತಿರುಗುವಾಗ ಒಂದು ಕಂದಕವನ್ನು ದಾಟುತ್ತಿದ್ದಂತೆ, ನೀರಿನ ಮಟ್ಟದಲ್ಲಿ ಹಠಾತ್ ಏರಿಕೆ ಕಂಡು ಬಂತು. ನಾನು ನಿಯಂತ್ರಣ ಕಳೆದುಕೊಂಡು ಬಿದ್ದೆ ಮತ್ತು ಪ್ರವಾಹದಲ್ಲಿ ಸ್ವಲ್ಪ ದೂರಕ್ಕೆ ಕರೆದೊಯ್ಯಲ್ಪಟ್ಟಿದ್ದೆ, ಆದರೆ ನನ್ನ ಜೊತೆಯಲ್ಲಿದ್ದ ಒಂದು ಡಜನ್ಗೂ ಹೆಚ್ಚು ಜನರು ನನ್ನನ್ನು ಪ್ರವಾಹದಿಂದ ಕಾಪಾಡಿದರು ಎಂದು ಅವರು ಹೇಳಿದ್ದಾರೆ.
ಸಮೀಪದಲ್ಲಿದ್ದ ಸೈನ್ಯದ ಸಿಬ್ಬಂದಿಯಿಂದ ಪ್ರಥಮ ಚಿಕಿತ್ಸೆ ನೀಡಲಾಗಿದೆ ಎಂದು ಧಮಿ ಹೇಳಿದ್ದು, ‘ನನ್ನ ಕಾಲಿಗೆ ಗಾಯವಾಗಿದೆ. ಧಾರ್ಚುಲಾ ಪಟ್ಟಣಕ್ಕೆ ಹೋಗಿ, ಅಲ್ಲಿ ನಾನು ವೈದ್ಯರಿಂದ ಪರೀಕ್ಷಿಸಲ್ಪಡುತ್ತೇನೆ ಎಂದು ಹೇಳಿದ್ದಾರೆ.
ಈ ಪೀಡಿತ ಪ್ರದೇಶಗಳಲ್ಲಿನ ಪರಿಸ್ಥಿತಿ ತುಂಬಾ ಗಂಭೀರವಾಗಿದೆ. ಗ್ರಾಮಸ್ಥರು ಹತ್ತಿರದ ಪ್ರದೇಶದಲ್ಲಿ ಆಶ್ರಯ ಪಡೆದಿದ್ದಾರೆ ಮತ್ತು ಸ್ಥಳಾಂತರಿಸಲು ಬಯಸುತ್ತಿದ್ದಾರೆ. ಈ ಪೀಡಿತ ಪ್ರದೇಶದ ಜನರಿಗೆ ಸಹಾಯ ಮಾಡಲು ನಾನು ಕಳೆದ ಮೂರು ವರ್ಷಗಳಿಂದ ಪ್ರಯತ್ನಿಸುತ್ತಿದ್ದೇನೆ ಎಂದು ಅವರು ಹೇಳಿದರು.
ಚಮೋಲಿ ಜಿಲ್ಲೆಯ ತ್ರಿಖೋಲಾ ಗ್ರಾಮದಲ್ಲಿ ಭೂಕುಸಿತದ ನಂತರ ಐದು ಹಸುಗಳು ಭಗ್ನಾವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಎಸ್‌ಡಿಆರ್‌ಎಫ್ ತಂಡವೊಂದು ಈ ಪ್ರದೇಶಕ್ಕೆ ತೆರಳಿದೆ
ಲಾಲ್ಡಾಂಗ್ ಬಳಿಯ ಡೆಹ್ರಾಡೂನ್ ಜಿಲ್ಲೆಯ ಒಂದು ವಾಹನವು ನದಿಗೆ ಬಿದ್ದಿದೆ. ವಾಹನದಲ್ಲಿ ಇಬ್ಬರು ಇದ್ದು ಒಬ್ಬನು ತನ್ನಷ್ಟಕ್ಕೆ ತಾನೇ ಈಜಿ ಪಾರಾದರೆ, ಇನ್ನೊಬ್ಬ ವ್ಯಕ್ತಿ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ. ಅವರ ದೇಹವನ್ನು ಎಸ್‌ಡಿಆರ್‌ಎಫ್ ತಂಡದಿಂದ ಹೊರತೆಗೆಯಲಾಯಿತು. ಆತನನ್ನು ಶಿಮ್ಲಾದ ಅಜಯ್ ಕುಮ್ತಾ (24) ಎಂದು ಗುರುತಿಸಲಾಗಿದೆ .