ಜ್ವರವಿದ್ದರೂ ಪ್ರಚಾರ ಮಾಡಿದ್ದು ಮುಖ್ಯಮಂತ್ರಿಗಳ ಬೇಜವಾಬ್ದಾರಿತನಕ್ಕೆ ಸಾಕ್ಷಿ
ಬೆಂಗಳೂರು: ‘ಕೊರೋನಾ ಸೋಂಕು ಹೆಚ್ಚುತ್ತಿರುವ ಈ ಕಠಿಣ ಪರಿಸ್ಥಿತಿಯಲ್ಲಿ ಜ್ವರವಿದ್ದರೂ ಚುನಾವಣಾ ಪ್ರಚಾರ ಮಾಡಿರುವುದು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬೇಜವಾಬ್ದಾರಿತನಕ್ಕೆ ಸಾಕ್ಷಿ ಎಂದು ರಾಜ್ಯ ಕಾಂಗ್ರೆಸ್ ಟೀಕಿಸಿದೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮತ್ತೆ ಕೊರೊನಾ ಸೋಂಕು ದೃಢಪಟ್ಟಿದೆ. ಕಳೆದ ಎರಡು ದಿನಗಳಿಂದ ಸಿಎಂ ಬಿಎಸ್ ವೈ ಜ್ವರದಿಂದ ಬಳಲುತ್ತಿದ್ದರು. ಈ ಹಿನ್ನೆಲೆ ಅವರಿಗೆ ಕೊರೊನಾ ಟೆಸ್ಟ್ ಮಾಡಿಸಲಾಗಿದ್ದು, ಇದೀಗ ಕೊರೊನಾ ಪಾಸಿಟಿವ್ ಬಂದಿದೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, “ಜ್ವರದ ಹಿನ್ನೆಲೆಯಲ್ಲಿ ಇಂದು ತಪಾಸಣೆಗೆ ಒಳಪಟ್ಟಾಗ ಕೋವಿಡ್ ಪರೀಕ್ಷಾ ವರದಿ ಪಾಸಿಟಿವ್ ಬಂದಿದೆ. ಅಲ್ಪ ಪ್ರಮಾಣದಲ್ಲಿ ರೋಗ ಲಕ್ಷಣಗಳಿರುವುದರಿಂದ ವೈದ್ಯರ ಸಲಹೆಯಂತೆ ಮಣಿಪಾಲ್ ಆಸ್ಪತ್ರೆಗೆ ದಾಖಲಾಗುತ್ತಿದ್ದೇನೆ. ಕಳೆದ ಕೆಲವು ದಿನಗಳಲ್ಲಿ ನನ್ನ ಸಂಪರ್ಕಕ್ಕೆ ಬಂದಿದ್ದವರು ಕ್ವಾರಂಟೈನ್ ನಲ್ಲಿದ್ದು, ಒಮ್ಮೆ ಪರೀಕ್ಷಿಸಿಕೊಳ್ಳಿ ಎಂದು ಕೋರುತ್ತೇನೆ” ಎಂದು ಬರೆದುಕೊಂಡಿದ್ದಾರೆ.
ಈ ವಿಚಾರವಾಗಿ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, ‘ಕೊರೋನಾ ಸೋಂಕು ಹೆಚ್ಚುತ್ತಿರುವ ಈ ಕಠಿಣ ಪರಿಸ್ಥಿತಿಯಲ್ಲಿ ಜ್ವರವಿದ್ದರೂ ಚುನಾವಣಾ ಪ್ರಚಾರ ಮಾಡಿರುವುದು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬೇಜವಾಬ್ದಾರಿತನಕ್ಕೆ ಸಾಕ್ಷಿ. ಈ ಹಿಂದೆ ಕೊರೋನಾ ಸೋಂಕಿತರಾಗಿದ್ದ ರಮೇಶ್ ಜಾರಕಿಹೊಳಿ ಅವರನ್ನು ಚುನಾವಣಾ ಪ್ರಚಾರಕ್ಕೆ ಆಹ್ವಾನಿಸಿದ್ದರು. ಇಂತಹ ಸರ್ಕಾರದಿಂದ ಸೋಂಕು ನಿಯಂತ್ರಣ ಸಾಧ್ಯವೇ ಎಂದು ಪ್ರಶ್ನೆ ಮಾಡಿದೆ.