ಬೆಂಗಳೂರು : ಕಾಂಗ್ರೆಸ್ (Congress) ಪಕ್ಷವು ಯೂಸ್ ಆ್ಯಂಡ್ ಥ್ರೋ ಪಕ್ಷ. ಚುನಾವಣೆ ಮುಗಿಯುವವರೆಗೆ ಬಿಜೆಪಿಯಿಂದ (BJP) ಹೋದವರಿಗೆ ಸನ್ಮಾನ ಮಾಡುತ್ತಾರೆ. ಚುನಾವಣೆ ಮುಗಿದ ಮೇಲೆ ಅವರಿಗೆ ಅಪಮಾನ ಮಾಡುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಕಾಂಗ್ರೆಸ್ ಪಕ್ಷವನ್ನು ಲೇವಡಿ ಮಾಡಿದರು.
ಪ್ಲಾನ್ ಮಾಡಿ ನನ್ನನ್ನು ಬಿಜೆಪಿಯಿಂದ ಹೊರದಬ್ಬಿದ್ದಾರೆ ಎಂಬ ಜಗದೀಶ್ ಶೆಟ್ಟರ್ (Jagadish Shettar) ಹೇಳಿಕೆಗೆ ಬೆಂಗಳೂರಿನಲ್ಲಿ (Bengaluru) ಪ್ರತಿಕ್ರಿಯಿಸಿದ ಅವರು, ಯಾರಾದರೂ ಪಕ್ಷ ಬಿಟ್ಟು ಹೋದಾಗ ಏನಾದರು ಒಂದು ಕಾರಣ ಕೊಡಲೇಬೇಕು. ಜಗದೀಶ್ ಶೆಟ್ಟರ್ ಅವರಿಗೆ ಸ್ಥಾನಮಾನಗಳನ್ನು ಕೊಡುವುದರ ಜೊತೆಗೆ ಅವರನ್ನು ಅತ್ಯಂತ ಗೌರವಯುತವಾಗಿ ಬಿಜೆಪಿ ಕಂಡಿದೆ. ಇದರಲ್ಲಿ ಎರಡನೇ ಮಾತಿಲ್ಲ.
ಕಳೆದ 25 ವರ್ಷದ ಅವರ ಬೆಳವಣಿಗೆಯಲ್ಲಿ ಬಿಜೆಪಿಯೇ ಪ್ರಮುಖವಾದ ಪಾತ್ರ ವಹಿಸಿದೆ. 25 ವರ್ಷ ಅವರನ್ನು ಬೆಳೆಸಿದ ಬಿಜೆಪಿ ಈಗ ಅವರನ್ನು ಕೆಳಗಿಳಿಸುವ ಪ್ರಯತ್ನ ಮಾಡಿಲ್ಲ. ಷಡ್ಯಂತ್ರದ ಪ್ರಶ್ನೆಯೇ ಇಲ್ಲ. ಪಕ್ಷದ ವರಿಷ್ಠರಿಗೂ ಕೂಡಾ ಇದರ ಬಗ್ಗೆ ಮಾಹಿತಿಯಿದೆ ಎಂದು ಹೇಳಿದ್ದಾರೆ.
ಬಿಜೆಪಿ ಜನ ಸಮುದಾಯದಿಂದ ಹಾಗೂ ಕಾರ್ಯಕರ್ತರಿಂದ ಬೆಳೆದಿರುವ ಪಕ್ಷ. ಇಂತಹ ಘಟನೆಗಳನ್ನು ಸಂಪೂರ್ಣವಾಗಿ ನಿಭಾಯಿಸುವ ಶಕ್ತಿ ಬಿಜೆಪಿಗಿದೆ. ನಾವು ಖಂಡಿತವಾಗಿಯೂ ನಮ್ಮ ಕ್ಷೇತ್ರವನ್ನು ಗಟ್ಟಿಯಾಗಿ ಇಟ್ಟುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
50 ವರ್ಷಗಳಿಂದ ಲಿಂಗಾಯತ ನಾಯಕರನ್ನು ತುಳಿದಿದ್ದು ಇದೇ ಕಾಂಗ್ರೆಸ್ ಪಕ್ಷ. ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರಿಗೆ ಲಿಂಗಾಯತರ ಮೇಲೆ ಯಾಕಿಷ್ಟು ಪ್ರೀತಿ ಬಂತೋ ಗೊತ್ತಿಲ್ಲ. ಲಿಂಗಾಯತ ಸಮುದಾಯ ಜಾಗೃತ ಸಮುದಾಯವಾಗಿದ್ದು, ಇದುವರೆಗೂ ಯಾರು ಅವರನ್ನು ಬೆಂಬಲಿಸಿದ್ದಾರೆ ಎಂಬುದು ಅವರಿಗೆ ಗೊತ್ತಿದೆ ಎಂದು ಹೇಳಿದ್ದಾರೆ.








