ದಾವಣಗೆರೆ : ಕಾಂಗ್ರೆಸ್ ನಾಯಕರಿಗೆ ಹೋರಾಟವೇ ಗೊತ್ತಿಲ್ಲ. ಅವರೆಲ್ಲ ರೆಡಿಮೆಡ್ ಫುಡ್ ಇದ್ದಂತೆ. ಅವರು ಇಂದಿರಾ ಗಾಂಧಿ, ಸೋನಿಯಾ ಗಾಂಧಿ ಹೆಸರೇಳಿಕೊಂಡು ಅಧಿಕಾರಕ್ಕೆ ಬರುವವರು ಎಂದು ಶಾಸಕ ಎಂಪಿ ರೇಣುಕಾಚಾರ್ಯ ಕಿಡಿಕಾರಿದ್ದಾರೆ.
ತೈಲ ಬೆಲೆ ಏರಿಕೆ ವಿರೋಧಿಸಿ ಕೈ ನಾಯಕರು, ಕಾರ್ಯಕರ್ತರು ಇಂದು ಪ್ರತಿಭಟನೆ ನಡೆಸಿದ್ದು, ಈ ಬಗ್ಗೆ ದಾವಣಗೆರೆಯ ನ್ಯಾಮತಿ ತಾಲೂಕಿನಲ್ಲಿ ಸುರಹೊನ್ನೆಯಲ್ಲಿ ರೇಣುಕಾಚಾರ್ಯ ಪ್ರತಿಕ್ರಿಯೆ ನೀಡಿದ್ದು, ಕಾಂಗ್ರೆಸ್ ವಿರುದ್ಧ ಸಿಡಿಮಿಡಿಗೊಂಡಿದ್ದಾರೆ. ಕಾಂಗ್ರೆಸ್ಸಿಗರು ಯಾವುದೇ ಅನುಮತಿ ನೀಡದೆ ಪ್ರತಿಭಟನೆ ಮಾಡುತ್ತಾ ಇದ್ದಾರೆ. ಕೊರೊನಾ ಸಂದರ್ಭದಲ್ಲಿ ಸಾಂಕೇತಿಕವಾಗಿ ಪ್ರತಿಭಟನೆ ಮಾಡಲಿ. ಪ್ರಧಾನಿಗಳಿಗೆ ಮನವಿ ಮಾಡಿಕೊಳ್ಳಲಿ. ಆದರೆ ಇಲ್ಲಿ ಅವರು ನಿಯಮಗಳನ್ನು ಗಾಳಿಗೆ ತೂರಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಬುಸು ಗುಟ್ಟಿದರು.
ನಿನ್ನೆ ಸಾವಿರಕ್ಕೂ ಹೆಚ್ಚು ಪಾಸಿಟಿವ್ ಕೇಸ್ ಗಳು ಬಂದಿದೆ. ದಿನೇದಿನೇ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುವುದರಲ್ಲೇ ಇದೆ. ಅಂತಹ ಸಂದರ್ಭದಲ್ಲಿ ಸಾವಿರಾರು ಜನ ಸೇರಿ ಪ್ರತಿಭಟನೆ ಮಾಡಿದರೆ ಹೇಗೆ ಎಂದು ರೇಣುಕಾಚಾರ್ಯ ಪ್ರಶ್ನಿಸಿದರು.
ಮುಂದುವರಿದು ಮಾತನಾಡಿ, ಪ್ರತಿಪಕ್ಷಗಳ ಸಭೆ ಕರೆದರೂ ಬಾರದೇ ನಿರ್ಲಕ್ಷ್ಯ ತೋರಿದ್ದಾರೆ. ಕೊರೊನಾ ಜಾಗೃತಿ ಮೂಡಿಸುವ ಕೆಲಸ ಮಾಡುವ ಬದಲು ಈ ರೀತಿ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದವರಿಗೆ ಹೋರಾಟವೇ ಗೊತ್ತಿಲ್ಲ. ಅವರೆಲ್ಲ ರೆಡಿ ಫುಡ್ ಇದ್ದಂತೆ. ಇಂದಿರಾ ಗಾಂಧಿ, ಸೋನಿಯಾ ಗಾಂಧಿ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬರುವವರು. ಅವರ ವಿರುದ್ಧದ ಕಾನೂನಿನ ಕ್ರಮದ ಬಗ್ಗೆ ಮುಖ್ಯಮಂತ್ರಿಗಳು ನಿರ್ಧಾರ ಮಾಡುತ್ತಾರೆ ಎಂದು ಕಾಂಗ್ರೆಸ್ ವಿರುದ್ಧ ಗುಡುಗಿದರು. .