ಕೊಪ್ಪಳ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಯ ದೃಷ್ಟಿಯಿಂದ ವಿಮಾನ ನಿಲ್ದಾಣ ನಿರ್ಮಾಣ : ವಿ.ಸೋಮಣ್ಣ
ಬೆಂಗಳೂರು : ವಸತಿ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ವಿ.ಸೋಮಣ್ಣ ಅವರ ಅಧ್ಯಕ್ಷತೆಯಲ್ಲಿ ಇಂದು ಬೆಳಗ್ಗೆ ವಿಧಾನಸೌಧ ದಲ್ಲಿ ಕೊಪ್ಪಳ ಜಿಲ್ಲೆಯ ಕೊಪ್ಪಳ ತಾಲೂಕಿನಲ್ಲಿ ಹೊಸದಾಗಿ ವಿಮಾನನಿಲ್ದಾಣ ಸ್ಥಾಪಿಸುವ ಕುರಿತಂತೆ ಮತ್ತು ಜಿಲ್ಲೆಯ ಇನ್ನಿತರ ಮೂಲಸೌಲಭ್ಯ ಅಭಿವೃದ್ಧಿ ಇಲಾಖೆಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆಯನ್ನು ನಡೆಸಿದರು.
ಕೊಪ್ಪಳ ಜಿಲ್ಲೆಯು ಚಾರಿತ್ರಿಕ ಪ್ರದೇಶವಾಗಿದ್ದು ಅಂಜನಾದ್ರಿ ಬೆಟ್ಟ ಸೇರಿದಂತೆ ಇನ್ನಿತರ ಪ್ರವಾಸೋದ್ಯಮ ಪ್ರದೇಶಗಳು ಹೆಚ್ಚಾಗಿದ್ದು ಜಿಲ್ಲೆಯು ಮೂಲ ಸೌಲಭ್ಯಗಳಿಂದ ವಂಚಿತವಾಗಿ ಹಿಂದುಳಿದ ಜಿಲ್ಲೆಯಾಗಿದೆ.
ಇಲ್ಲಿ ಮೂಲಸೌಲಭ್ಯಗಳನ್ನು ಅವಶ್ಯವಾಗಿ ಕಲ್ಪಿಸುವುದು ಸೇರಿದಂತೆ ಈ ಭಾಗದ ಜನರ, ಪ್ರವಾಸಿಗರ ಹಾಗೂ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಯ ಹಿತದೃಷ್ಟಿಯಿಂದ ಇಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡುವುದು ಅತ್ಯಂತ ಪ್ರಮುಖವಾಗಿದ್ದು ಅಗತ್ಯ ಜಮೀನನ್ನು ಭೂಸ್ವಾಧೀನ ಪ್ರಕ್ರಿಯೆಯನ್ನು ತುರ್ತಾಗಿ ಕೈಗೊಳ್ಳಲು ಮೂಲಸೌಲಭ್ಯ ಅಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು ಮತ್ತು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.
ಮುಂದುವರೆದು ಕರ್ನಾಟಕ ರಾಜ್ಯ ಮೂಲಸೌಕರ್ಯ ಅಭಿವೃದ್ಧಿ ನಿಗಮದ ತಾಂತ್ರಿಕ ಸಮಿತಿ ಸದಸ್ಯರು ಸದರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಅಗತ್ಯ ವರದಿ ಹಾಗೂ ಸೂಕ್ತ ಪ್ರಸ್ತಾವನೆಯನ್ನು ಸಲ್ಲಿಸಲು ಈ ಸಂದರ್ಭದಲ್ಲಿ ಸೂಚನೆ ನೀಡಿದರು.
ಕೊಪ್ಪಳ ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ನಿರ್ಮಿಸುವುದರಿಂದ ಜಿಲ್ಲೆಯ ಪ್ರವಾಸೋದ್ಯಮ ಮತ್ತಷ್ಟು ಉತ್ತುಂಗಕ್ಕೇರಲಿದೆ. ಅಂಜನಾದ್ರಿ, ಕೊಪ್ಪಳದ ಕೋಟೆ, ಕಬ್ಬರಗಿ ಜಲಪಾತ, ಕುಕನೂರು, ಸೇರಿದಂತೆ ಅನೇಕ ಪ್ರವಾಸಿ ಸ್ಥಳಗಳಲ್ಲಿ ಮತ್ತಷ್ಟು ಮೂಲ ಸೌಕರ್ಯಗಳ ಅಭಿವೃದ್ಧಿಯಾಗಲಿದೆ ಎಂದು ಸಚಿವರು ತಿಳಿಸಿದರು.
ಸದರಿ ಸಭೆಯಲ್ಲಿ ಗಣಿ ಮತ್ತು ಭೂವಿಜ್ಞಾನ ಸಚಿವರು ಮತ್ತು ಸಂಸದರು ಕೊಪ್ಪಳ ಲೋಕಸಭಾ ಕ್ಷೇತ್ರ, ಕೊಪ್ಪಳ, ಗಂಗಾವತಿ, ಕನಕಗಿರಿ, ಕುಷ್ಟಗಿ ವಿಧಾನಸಭಾ ಕ್ಷೇತ್ರದ ಶಾಸಕರು, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಮೂಲಸೌಲಭ್ಯ ಅಭಿವೃದ್ಧಿ ಇಲಾಖೆ, ವ್ಯವಸ್ಥಾಪಕ ನಿರ್ದೇಶಕರು ಕರ್ನಾಟಕ ರಾಜ್ಯ ಕೈಗಾರಿಕಾ ಮೂಲಸೌಕರ್ಯ ಅಭಿವೃದ್ಧಿ ನಿಗಮ, ಕೊಪ್ಪಳ ಜಿಲ್ಲೆಯ ಜಿಲ್ಲಾಧಿಕಾರಿಗಳು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಅಪರ ನಿರ್ದೇಶಕರು, ಕರ್ನಾಟಕ ರಾಜ್ಯ ಕೈಗಾರಿಕಾ ಮೂಲಸೌಕರ್ಯ ಅಭಿವೃದ್ಧಿ ನಿಗಮ ಹಾಗೂ ಇತರ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.









