ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ (ಸಿಜೆಐ) ಬಿ.ಆರ್. ಗವಾಯಿ ಅವರ ಮೇಲೆಯೇ ವಕೀಲರೊಬ್ಬರು ಶೂ ಎಸೆದ ಘಟನೆ ಇಡೀ ನ್ಯಾಯಾಂಗ ವ್ಯವಸ್ಥೆಯನ್ನೇ ಬೆಚ್ಚಿಬೀಳಿಸಿದೆ. ಕೇವಲ ನ್ಯಾಯಾಲಯದ ನಿಂದನೆಯಾಗಿ ಉಳಿಯದೆ, ಈ ಘಟನೆ ಈಗ ಜಾತಿ ಮತ್ತು ಧರ್ಮದ ಬಣ್ಣ ಪಡೆದು ರಾಜಕೀಯ ಸ್ವರೂಪ ಪಡೆದುಕೊಳ್ಳುತ್ತಿದೆ. ವಿಷ್ಣುವಿನ ವಿಗ್ರಹದ ಕುರಿತು ಸಿಜೆಐ ನೀಡಿದರೆನ್ನಲಾದ ಹೇಳಿಕೆ ಮತ್ತು ನಂತರ ದರ್ಗಾಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಅವರು ನೀಡಿದ ಆದೇಶಗಳ ನಡುವಿನ ವ್ಯತ್ಯಾಸವೇ ಈ ದೊಡ್ಡ ವಿವಾದದ ಕೇಂದ್ರಬಿಂದುವಾಗಿದೆ.
ವಿವಾದಕ್ಕೆ ಕಾರಣವಾದ ವಿಷ್ಣು ವಿಗ್ರಹ ಪ್ರಕರಣ
ಮಧ್ಯಪ್ರದೇಶದ ಖಜುರಾಹೊದಲ್ಲಿರುವ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಜವಾರಿ ದೇವಾಲಯದಲ್ಲಿರುವ 7 ಅಡಿ ಎತ್ತರದ ವಿಷ್ಣುವಿನ ವಿಗ್ರಹದ ಶಿರ ತುಂಡಾಗಿತ್ತು. ಇದನ್ನು ಮರುಸ್ಥಾಪಿಸಲು ಆದೇಶ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲಾಗಿತ್ತು.
ಈ ಅರ್ಜಿಯ ವಿಚಾರಣೆ ನಡೆಸಿದ ಸಿಜೆಐ ಬಿ.ಆರ್. ಗವಾಯಿ ನೇತೃತ್ವದ ಪೀಠ, ಇದನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಬದಲು “ಪ್ರಚಾರದ ಹಿತಾಸಕ್ತಿ ಅರ್ಜಿ” ಎಂದು ತೀಕ್ಷ್ಣವಾಗಿ ಟೀಕಿಸಿತು. ಅರ್ಜಿದಾರರನ್ನು ಉದ್ದೇಶಿಸಿ ಮಾತನಾಡಿದ ಸಿಜೆಐ, “ನೀವು ವಿಷ್ಣುವಿನ ಮಹಾನ್ ಭಕ್ತರಲ್ಲವೇ? ಹಾಗಿದ್ದರೆ ನ್ಯಾಯಕ್ಕಾಗಿ ದೇವರನ್ನೇ ಪ್ರಾರ್ಥಿಸಿ, ಧ್ಯಾನ ಮಾಡಿ. ವಿಗ್ರಹದ ಮರುಸ್ಥಾಪನೆಗೆ ಅವನೇ ದಾರಿ ತೋರಿಸಬಹುದು” ಎಂದು ಹೇಳಿದ್ದರು. ಈ ಹೇಳಿಕೆಯೇ ವಿವಾದದ ಕಿಡಿಯನ್ನು ಹೊತ್ತಿಸಿತು.
ಭುಗಿಲೆದ್ದ ಆಕ್ರೋಶ ಮತ್ತು ಸ್ಪಷ್ಟನೆ
ಸಿಜೆಐ ಅವರ ಈ ಮಾತುಗಳು ಸನಾತನ ಧರ್ಮಕ್ಕೆ ಮಾಡಿದ ಅವಮಾನ ಮತ್ತು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿವೆ ಎಂದು ತೀವ್ರ ಆಕ್ರೋಶ ವ್ಯಕ್ತವಾಯಿತು. ಹಲವು ವಕೀಲರು ಸಿಜೆಐಗೆ ಪತ್ರ ಬರೆದು ತಮ್ಮ ಹೇಳಿಕೆಯನ್ನು ಹಿಂಪಡೆಯುವಂತೆ ಆಗ್ರಹಿಸಿದ್ದರು.
ವಿವಾದ ತೀವ್ರಗೊಳ್ಳುತ್ತಿದ್ದಂತೆ ಸ್ಪಷ್ಟನೆ ನೀಡಿದ ಸಿಜೆಐ ಗವಾಯಿ, “ನಾನು ಎಲ್ಲಾ ಧರ್ಮಗಳನ್ನು ಅಪಾರವಾಗಿ ಗೌರವಿಸುತ್ತೇನೆ. ನನ್ನ ಮಾತುಗಳನ್ನು ತಪ್ಪಾಗಿ ಅರ್ಥೈಸಲಾಗಿದೆ. ನ್ಯಾಯಾಲಯದ ಸಮಯವನ್ನು ಅನಗತ್ಯ ಅರ್ಜಿಗಳು ಹಾಳುಮಾಡಬಾರದು ಎಂಬ ದೃಷ್ಟಿಯಲ್ಲಿ ಆ ಮಾತನ್ನು ಹೇಳಿದ್ದೆ” ಎಂದು ತಿಳಿಸಿದ್ದರು.
ವಿವಾದಕ್ಕೆ ತಿರುವು ಕೊಟ್ಟ ದರ್ಗಾ ಪ್ರಕರಣಗಳು
ವಿಷ್ಣು ವಿಗ್ರಹದ ಪ್ರಕರಣದ ನಂತರ ಸಿಜೆಐ ಗವಾಯಿ ನೇತೃತ್ವದ ಪೀಠವು ದರ್ಗಾಗಳಿಗೆ ಸಂಬಂಧಿಸಿದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ನೀಡಿದ ಆದೇಶಗಳು ವಿವಾದವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದವು.
1. ದೆಹಲಿಯ ಆಶಿಕ್ ಅಲ್ಲಾ ದರ್ಗಾ: 14ನೇ ಶತಮಾನದ ಐತಿಹಾಸಿಕ ದರ್ಗಾದ ಪುನಃಸ್ಥಾಪನೆಯನ್ನು ಮೇಲ್ವಿಚಾರಣೆ ಮಾಡುವಂತೆ ಕೋರಿದ್ದ ಅರ್ಜಿಯ ವಿಚಾರಣೆ ನಡೆಸಿದ ಸಿಜೆಐ ಪೀಠ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ASI) ದರ್ಗಾದ ಪುನಃಸ್ಥಾಪನೆಯನ್ನು ನೋಡಿಕೊಳ್ಳುವಂತೆ ನಿರ್ದೇಶನ ನೀಡಿತ್ತು.
2. ಮುಂಬೈನ ಬೇಲ್ ಶಾ ಪೀರ್ ದರ್ಗಾ: ಮುಂಬೈನ ಉತ್ತನ್‌ನಲ್ಲಿರುವ ದರ್ಗಾದಲ್ಲಿ ಅಕ್ರಮ ನಿರ್ಮಾಣ ನಡೆಯುತ್ತಿದೆ ಎಂದು, ಅದನ್ನು ಕೆಡವಲು ಮಹಾರಾಷ್ಟ್ರ ಕಂದಾಯ ಇಲಾಖೆ ನೀಡಿದ್ದ ಆದೇಶಕ್ಕೆ ಸಿಜೆಐ ಗವಾಯಿ ನೇತೃತ್ವದ ಪೀಠವೇ ತಡೆಯಾಜ್ಞೆ ನೀಡಿತ್ತು.
ಹಿಂದೂ ದೇವಸ್ಥಾನದ ವಿಗ್ರಹ ಮರುಸ್ಥಾಪನೆಗೆ ಕೋರಿದಾಗ “ದೇವರಲ್ಲೇ ಕೇಳಿ” ಎಂದು ಹೇಳಿದ್ದ ನ್ಯಾಯಪೀಠವೇ, ದರ್ಗಾಗಳ ಪುನಃಸ್ಥಾಪನೆ ಮತ್ತು ರಕ್ಷಣೆಗೆ ಮುಂದಾಗಿರುವುದು ಯಾಕೆ? ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಎದ್ದಿದೆ. ಒಂದೇ ಸ್ವರೂಪದ ಧಾರ್ಮಿಕ ವಿಷಯಗಳಲ್ಲಿ ನ್ಯಾಯಾಲಯವು ಎರಡು ರೀತಿಯ ನಿಲುವು ತಳೆದಿದೆ ಎಂಬ ಆರೋಪ ಕೇಳಿಬಂದಿದೆ.
ವಿಷ್ಣು ವಿಗ್ರಹದ ವಿಷಯದಲ್ಲಿ ನ್ಯಾಯಾಲಯದ ಸಮಯ ವ್ಯರ್ಥ ಎಂದು ಭಾವಿಸಿದ ಸಿಜೆಐ, ದರ್ಗಾಗಳ ವಿಷಯದಲ್ಲಿ ಯಾಕೆ ಮಧ್ಯಪ್ರವೇಶಿಸಿದರು? ಇದು ನ್ಯಾಯಾಂಗ ವ್ಯವಸ್ಥೆಯಲ್ಲಿ ತಾರತಮ್ಯ ನೀತಿಯನ್ನು ಅನುಸರಿಸಲಾಗುತ್ತಿದೆ ಎಂಬುದಕ್ಕೆ ಸಾಕ್ಷಿ ಎಂದು ಹಲವರು ವಾದಿಸುತ್ತಿದ್ದಾರೆ. ಇದೇ ಹೋಲಿಕೆಯೇ ಈಗ ವಿವಾದದ ಕೇಂದ್ರಬಿಂದುವಾಗಿದ್ದು, ನ್ಯಾಯಾಂಗದ ನಿಷ್ಪಕ್ಷಪಾತದ ಬಗ್ಗೆಯೇ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.








