ವಿಭಿನ್ನ ಸಾರು / ಗೊಜ್ಜು / ಗ್ರೇವಿ / ಚೆಟ್ನಿಗಳ ರೆಸಿಪಿಗಳು..!
ತರಕಾರಿಗಳಿಲ್ಲದ ಸರಳವಾದ ಸಾಂಬಾರ್
ತೊಗರಿ ಬೇಳೆ (ದಾಲ್) – 11/2 ಕಪ್
ಮಧ್ಯಮ ಗಾತ್ರದ ಈರುಳ್ಳಿ 1
ನೀರು 4 ಕಪ್
ರುಚಿಗೆ ತಕ್ಕಷ್ಟು ಉಪ್ಪು
ಹುಣಸೆಹಣ್ಣಿನ ಪೇಸ್ಟ್ 1 ಟೀಸ್ಪೂನ್
ಅರಿಶಿನ ಪುಡಿ 1/2 ಟೀಸ್ಪೂನ್
ಕೆಂಪು ಮೆಣಸಿನ ಪುಡಿ 1 ಟೀಸ್ಪೂನ್
ಕೊತ್ತಂಬರಿ ಹುಡಿ 2 ಟೀಸ್ಪೂನ್
ಮೆಂತ್ಯ ಹುಡಿ 1/4 ಟೀಸ್ಪೂನ್
ಸಾಂಬಾರ್ ಪುಡಿ (ಸಾಂಬಾರ್ ಮಸಾಲ) 2 ಟೀಸ್ಪೂನ್
ಮಾಡುವ ವಿಧಾನ
1 ಟೀಸ್ಪೂನ್ ಹುಣಸೆಹಣ್ಣಿನ ಪೇಸ್ಟ್ ಅನ್ನು ನೀರಿನಲ್ಲಿ ಸುಮಾರು 5 ರಿಂದ 10 ನಿಮಿಷ ನೆನೆಸಿ ಫಿಲ್ಟರ್ ಮಾಡಿ ಇಡಿ.
ನಂತರ ತೊಗರಿಬೇಳೆಯನ್ನು ಚೆನ್ನಾಗಿ ತೊಳೆದು ಕುಕ್ಕರ್ ನಲ್ಲಿ ಹೋಳು ಮಾಡಿದ ಈರುಳ್ಳಿ ಜೊತೆಗೆ 2 ಕಪ್ ನೀರು ಸೇರಿಸಿ ಬೇಯಿಸಿ.
ಕುಕ್ಕರ್‌ನಲ್ಲಿ 3 ವಿಸಿಲ್ ಹಾಕಿಸಿ. ನಂತರ ಪಾತ್ರೆಗೆ ವರ್ಗಾಯಿಸಿ.
ಇದಕ್ಕೆ ಉಳಿದ 2 ಕಪ್ ನೀರು, ಹುಣಸೆಹಣ್ಣು, ಉಪ್ಪು ಮತ್ತು ಅರಿಶಿನ ಪುಡಿ, ಕೆಂಪು ಮೆಣಸಿನ ಪುಡಿ, ಕೊತ್ತಂಬರಿ ಹುಡಿ, ಮೆಂತ್ಯ ಹುಡಿ ಮತ್ತು ಸಾಂಬಾರ್ ಮಸಾಲೆ ಸೇರಿಸಿ, ಚೆನ್ನಾಗಿ ಬೆರೆಸಿ. ಒಂದೆರಡು ನಿಮಿಷಗಳ ಕಾಲ ಮಧ್ಯಮ ಜ್ವಾಲೆಯಲ್ಲಿ ಕುದಿಸಿ. ಈಗ ಬಿಸಿ ಬಿಸಿಯಾದ ಸಾಂಬಾರ್ ಸವಿಯಲು ಸಿದ್ಧವಾಗಿದೆ.
ಈ ಸರಳವಾದ ಸಾಂಬಾರ್ ಇಡ್ಲಿ ಅಥವಾ ದೋಸೆ ಅಥವಾ ಅನ್ನದೊಂದಿಗೆ ಸವಿಯಲು ರುಚಿಕರವಾಗಿರುತ್ತದೆ.
ಅನಾನಸ್( ಪೈನಾಪಲ್) ಗೊಜ್ಜು
ಬೇಕಾಗುವ ಸಾಮಗ್ರಿಗಳು
ಉದ್ದಿನ ಬೇಳೆ 2 ಚಮಚ
ಜೀರಿಗೆ 1/2 ಚಮಚ
ಕಾಳುಮೆಣಸು 1/4 ಚಮಚ
ಚಿಟಕಿ ಇಂಗು
ಒಣ ಕೊಬ್ಬರಿ ತುರಿ 1/4 ಕಪ್
ಬಿಳಿ ಎಳ್ಳು 2ಚಮಚ
ಸಣ್ಣಗೆ ಹೆಚ್ಚಿದ ಪೈನಾಪಲ್ 1 ಕಪ್
ಸಾಸಿವೆ 1 ಚಮಚ
ಕತ್ತರಿಸಿದ ಕರಿಬೇವು ಸ್ವಲ್ಪ
ಹುಣಸೆ ರಸ 1/4 ಕಪ್
ಬೆಲ್ಲ ಪುಡಿ 2 ಚಮಚ
ರುಚಿಗೆ ತಕ್ಕಷ್ಟು ಉಪ್ಪು
ಚಿಟಕಿ ಅರಿಶಿನ
ಒಣಮೆಣಸು 6
ಎಣ್ಣೆ
ಮಾಡುವ ವಿಧಾನ
ಪಾನ್ ಗೆ ಉದ್ದಿನ ಬೇಳೆ, ಜೀರಿಗೆ, ಕಾಳುಮೆಣಸು ಇಂಗು, ಒಣ ಮೆಣಸಿನಕಾಯಿ ಹಾಕಿ ಹುರಿಯಿರಿ. ಒಣ ಕೊಬ್ಬರಿ ತುರಿ ಸೇರಿಸಿ ಕೆಂಪಗಾಗುವ ವರೆಗೆ ಹುರಿಯಿರಿ. ನಂತರ ಬಿಳಿ ಎಳ್ಳು ಹುರಿದು ಎಲ್ಲವನ್ನೂ ಮಿಕ್ಸಿ ಗೆ ಹಾಕಿ ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿ.
ಈಗ ಬಾಣಲೆಗೆ 4 ಚಮಚ ಎಣ್ಣೆ ಹಾಕಿ ಬಿಸಿ ಮಾಡಿ. ಅದಕ್ಕೆ ಸಾಸಿವೆ ಸೇರಿಸಿ, ಸಾಸಿವೆ ಸಿಡಿದ ಬಳಿಕ ಕರಿಬೇವು ಸೇರಿಸಿ.
ಅದಕ್ಕೆ ಸಣ್ಣಗೆ ಹೆಚ್ಚಿದ ಪೈನಾಪಲ್ ಸೇರಿಸಿ ಅರಿಶಿಣ ಹಾಕಿ ಬೇಯಿಸಿ. ಬಳಿಕ ಹುಣಸೆ ರಸ ಮತ್ತು ಬೆಲ್ಲ ಸೇರಿಸಿ. ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. 5 ನಿಮಿಷ ಕುದಿಸಿದ ಬಳಿಕ ರುಬ್ಬಿದ ಮಿಶ್ರಣವನ್ನು ಸೇರಿಸಿ ಕುದಿಸಿ. ಈಗ ಸವಿಯಲು ರುಚಿಯಾದ ಅನಾನಸ್ ಗೊಜ್ಜು ತಯಾರಾಗಿದೆ.
ತೊಗರಿ ಬೇಳೆ ಹಾಕದೆ ಸ್ಪೆಷಲ್ ಟೊಮೆಟೊ ಸಾರು
ಟೊಮೇಟೊ ನಾಲ್ಕು
ತೆಂಗಿನ ಕಾಯಿ ತುರಿ ಐದು ಚಮಚ
ಹಸಿ ಮೆಣಸು 2
ಕೊತ್ತಂಬರಿ ಸೊಪ್ಪು ಸ್ವಲ್ಪ
ಅರಿಶಿನ ಚಿಟಿಕೆ
ಧನಿಯ 2 ಚಮಚ
ಜೀರಿಗೆ 1/2 ಚಮಚ
ಮೆಂತ್ಯ 1/4 ಚಮಚ
ಬ್ಯಾಡಗಿ ಮೆಣಸು 4
ತುಪ್ಪ 1 ಚಮಚ
ಎಣ್ಣೆ 1 ಚಮಚ
ಉಪ್ಪು ರುಚಿಗೆ ತಕ್ಕಷ್ಟು.
ಹುಣಿಸೆ ಹಣ್ಣು ಸ್ವಲ್ಪ,
ಬೆಲ್ಲ ಸ್ವಲ್ಪ
ಒಗ್ಗರಣೆಗೆ
ಇಂಗು ಚಿಟಿಕೆಯಷ್ಟು ,
ಸಾಸಿವೆ 1/4 ಚಮಚ
ಒಂದು ಒಣ ಕೆಂಪು ಮೆಣಸು
ಕರಿಬೇವಿನ ಸೊಪ್ಪು ಸ್ವಲ್ಪ
ಟೊಮೇಟೊಗಳನ್ನು ಚೆನ್ನಾಗಿ ತೊಳೆದು ಚಿಕ್ಕದಾಗಿಕತ್ತರಿಸಿ ಇಟ್ಟು ಕೊಳ್ಳಿ. ಇದರಿಂದ ಒಂದು ಕಪ್ ನಷ್ಟು ಟೊಮೇಟೊ ಚೂರುಗಳನ್ನು ಪ್ರತ್ಯೇಕವಾಗಿ ತೆಗೆದಿಡಿ.
ಒಂದು ಬಾಣಲೆಯಲ್ಲಿ ಒಂದು ಚಮಚ ಎಣ್ಣೆ ಬಿಸಿ ಮಾಡಿ. ಅದಕ್ಕೆ ಧನಿಯ, ಜೀರಿಗೆ, ಮೆಂತೆ ಮತ್ತು ಬ್ಯಾಡಗಿ ಮೆಣಸು ಹಾಕಿ ಹುರಿದು ಒಂದು ಪ್ಲೇಟ್ ಮೇಲೆ ಹರಡಿ. ಅದನ್ನು ಚೆನ್ನಾಗಿ ಆರಲು ಬಿಡಿ.
ಆರಿದ ನಂತರ ಇದನ್ನು ಮಿಕ್ಸಿ ಜಾರಿಗೆ ಹಾಕಿ ಜೊತೆಗೆ ಹಸಿ ಮೆಣಸಿನಕಾಯಿ, ಕಾಯಿ ತುರಿ, ಹುಣಿಸೇಹಣ್ಣು, ಬೆಲ್ಲ, ಟೊಮೇಟೊ, ಅರಿಶಿನ, ಉಪ್ಪು ಮತ್ತು ಸ್ವಲ್ಪ ಕೊತ್ತಂಬರಿ ಸೊಪ್ಪು ಹಾಕಿ ರುಬ್ಬಿ.
ಈಗ ಒಂದು ಪ್ಯಾನ್ ಇಟ್ಟು ಅದು ತುಪ್ಪ ಹಾಕಿ. ತುಪ್ಪ ಕಾದ ಮೇಲೆ ಇಂಗು, ಸಾಸಿವೆ, ಕರಿಬೇವಿನ ಸೊಪ್ಪು ಮತ್ತು ಒಣ ಮೆಣಸಿನ ಕಾಯಿ ಒಗ್ಗರಣೆ ಕೊಟ್ಟು ಇದಕ್ಕೆ ಪ್ರತ್ಯೇಕವಾಗಿ ತೆಗೆದಿಟ್ಟ ಟೊಮೇಟೊ ಹಾಕಿ ಹುರಿಯಿರಿ. ಇದಕ್ಕೆ ಅರಿಶಿನ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಪುನಃ ಹುರಿಯಿರಿ. ಈಗ ಅದಕ್ಕೆ ರುಬ್ಬಿದ ಮಿಶ್ರಣವನ್ನು ಸೇರಿಸಿ. ನಿಮಗೆ ಎಷ್ಟು ಬೇಕು ಅಷ್ಟು ನೀರು ಸೇರಿಸಿ, ಚೆನ್ನಾಗಿ ಕುದಿಸಿ. ನಂತರ ಚಿಕ್ಕದಾಗಿ ಕತ್ತರಿಸಿದ ಕೊತ್ತಂಬರಿ ಸೊಪ್ಪು ಉದುರಿಸಿ.ರುಚಿಯಾದ ಸ್ಪೆಷಲ್ ಟೊಮೆಟೊ ಸಾರು ರೆಡಿಯಾಗಿದೆ. ಇದನ್ನು ಅನ್ನದ ಜೊತೆ ಕಲಸಿ ಊಟ ಮಾಡಿ.
ಪಾಲಕ್ ಪನೀರ್
2 ಕಟ್ಟು ಪಾಲಕ್ ಸೊಪ್ಪು
1 ಕಪ್ ಕತ್ತರಿಸಿದ ಈರುಳ್ಳಿ
1 ಕಪ್ ಕತ್ತರಿಸಿದ ಟೊಮೆಟೊ
1 ಟೀಸ್ಪೂನ್ ಹಸಿ ಮೆಣಸಿನಕಾಯಿ ಪೇಸ್ಟ್
1 ಟೀಸ್ಪೂನ್ ಶುಂಠಿ-ಬೆಳ್ಳುಳ್ಳಿ ಪೇಸ್ಟ್
1 ಕಪ್ ಹುರಿದ ಪನೀರ್ ತುಂಡುಗಳು
1/4 ಕಪ್ ಗೋಡಂಬಿ ಬೀಜಗಳು
1 ಒಣ ಕೆಂಪು ಮೆಣಸಿನಕಾಯಿ
1 ಟೀಸ್ಪೂನ್ ಗರಂ ಮಸಾಲ
ರುಚಿಗೆ ತಕ್ಕಷ್ಟು ಉಪ್ಪು
1 ಟೀಸ್ಪೂನ್ ಎಣ್ಣೆ ಅಥವಾ ಬೆಣ್ಣೆ
1/2 ಟೀಸ್ಪೂನ್ ಜೀರಿಗೆ
1/2 ಟೀಸ್ಪೂನ್ ಕೆಂಪು ಮೆಣಸಿನ ಪುಡಿ
1-2 ಟೀಸ್ಪೂನ್ ಕಸೂರಿ ಮೆತಿ (optional)
ಚಿಟಕಿಯಷ್ಟು ಇಂಗು
ಮಾಡುವ ವಿಧಾನ
ಮೊದಲು ಬಾಣಲೆಯಲ್ಲಿ ನೀರನ್ನು ಕುದಿಸಿ ಅದಕ್ಕೆ ಒಂದು ಚಮಚ ಉಪ್ಪು ಸೇರಿಸಿ ಮತ್ತು 2 ನಿಮಿಷಗಳ ಕಾಲ ಪಾಲಕ್ ಸೊಪ್ಪುಗಳನ್ನು ಆ ನೀರಿನಲ್ಲಿ ಹಾಕಿ ಬೇಯಿಸಿ.
ಈಗ ನೀರಿನಿಂದ ಪಾಲಕ್ ತೆಗೆದು ಕತ್ತರಿಸಿ ಮಿಕ್ಸರ್ ಜಾರ್‌ನಲ್ಲಿ ಹಾಕಿ. ನಯವಾಗಿ ಗ್ರೈಂಡ್ ಮಾಡಿ ಪ್ಯೂರೀಯನ್ನು ತಯಾರಿಸಿ ಪಕ್ಕದಲ್ಲಿ ಇರಿಸಿಕೊಳ್ಳಿ.
ಈಗ ಬಾಣಲೆಯಲ್ಲಿ ಎಣ್ಣೆ ಅಥವಾ ಬೆಣ್ಣೆಯನ್ನು ಬಿಸಿ ಮಾಡಿ. ನಂತರ ಜೀರಿಗೆ, ಒಣ ಕೆಂಪು ಮೆಣಸಿನಕಾಯಿ, ಈರುಳ್ಳಿ, ಗೋಡಂಬಿ ಬೀಜ ಸೇರಿಸಿ ಮತ್ತು ಈರುಳ್ಳಿ ಕೆಂಪಗಾಗುವವರೆಗೆ ಹುರಿಯಿರಿ.
ಈಗ ಕತ್ತರಿಸಿದ ಟೊಮೆಟೊ ಸೇರಿಸಿ ಮತ್ತು ಮೃದುವಾಗುವವರೆಗೆ ಬೇಯಿಸಿ.
ಅದಕ್ಕೆ ಹಸಿ ಮೆಣಸಿನಕಾಯಿ ಪೇಸ್ಟ್, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಕೆಂಪು ಮೆಣಸಿನ ಪುಡಿ, ಗರಂ ಮಸಾಲ, ಕಸೂರಿ ಮೆತಿ ಹುಡಿ, ಉಪ್ಪು ಸೇರಿಸಿ ಎಣ್ಣೆ ಬೇರ್ಪಡುವವರೆಗೆ ಬೇಯಿಸಿ.
ನಂತರ ತಣ್ಣಗಾಗಲು ಬಿಡಿ. ಈಗ ಈ ಈರುಳ್ಳಿ ಮಿಶ್ರಣವನ್ನು ಮಿಕ್ಸರ್ ಜಾರ್‌ನಲ್ಲಿ ಬೆರೆಸಿ ನಯವಾದ ಪೇಸ್ಟ್ ಮಾಡಿ.
ಈಗ ಈ ಎರಡೂ ಪೇಸ್ಟ್ (ಪಾಲಕ ಪೇಸ್ಟ್ ಮತ್ತು ಮಸಾಲಾ ಪೇಸ್ಟ್)ಗಳನ್ನು ಒಂದೇ ಬಾಣಲೆಯಲ್ಲಿ ಸೇರಿಸಿ 3-4 ನಿಮಿಷ ಬೇಯಿಸಿ ಅಥವಾ ಕುದಿಯುವವರೆಗೆ ಬೇಯಿಸಿ.
ಅದಕ್ಕೆ ಹುರಿದ ಪನೀರ್ ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ ಮತ್ತೆ ಕೆಲವು ನಿಮಿಷ ಬೇಯಿಸಿ. ರುಚಿಯಾದ ಪಾಲಕ್ ಪನೀರ್ ಸವಿಯಲು ಸಿದ್ಧವಾಗಿದೆ.
ಸೋರೆಕಾಯಿ ಚಟ್ನಿ
ಬೇಕಾಗುವ ಸಾಮಾಗ್ರಿಗಳು
ಕಡಲೆಬೇಳೆ – ಸ್ವಲ್ಪ
ಉದ್ದಿನ ಬೇಳೆ – ಸ್ವಲ್ಪ
ಕೊಬ್ಬರಿ ತುರಿ – 1/2 ಕಪ್
ಒಣಮೆಣಸಿನಕಾಯಿ – 4
ಇಂಗು – ಚಿಟಿಕೆ
ಕೊತ್ತಂಬರಿ ಸೊಪ್ಪು – ಸ್ವಲ್ಪ
ಸೋರೆಕಾಯಿ ತುಂಡುಗಳು – 1 ಬಟ್ಟಲು
ಹುಣಸೆ ಹಣ್ಣು, ಉಪ್ಪು – ರುಚಿಗೆ ತಕ್ಕಷ್ಟು
ಮಾಡುವ ವಿಧಾನ
ಮೊದಲಿಗೆ ಸೋರೆಕಾಯಿ ತುಂಡುಗಳನ್ನು ಬೇಯಿಸಿ ಇಟ್ಟು ಕೊಳ್ಳಿ. ನಂತರ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಕಡಲೆಬೇಳೆ, ಉದ್ದಿನ ಬೇಳೆ, ಕೊಬ್ಬರಿ ತುರಿ, ಒಣಮೆಣಸಿನಕಾಯಿ, ಇಂಗು ಗಳನ್ನು ಹುರಿದು ತೆಗೆಯಿರಿ.
ತಣ್ಣಗಾದ ನಂತರ ಕೊತ್ತಂಬರಿ ಸೊಪ್ಪು, ಹುಣಸೆ ಹಣ್ಣು, ಉಪ್ಪು ಸೇರಿಸಿ ರುಬ್ಬಿ . ಸ್ವಲ್ಪ ನುಣ್ಣಗಾದ ಬಳಿಕ ಬೇಯಿಸಿ ಇಟ್ಟುಕೊಂಡ ಸೋರೆಕಾಯಿ ತುಂಡುಗಳನ್ನು ಸೇರಿಸಿ ಚೆನ್ನಾಗಿ ರುಬ್ಬಿ.
ಇದನ್ನು ಅನ್ನದ ಜೊತೆಗೆ ತಿನ್ನಲು ರುಚಿಯಾಗಿರುತ್ತದೆ. ಇದರಲ್ಲಿ ಕಬ್ಬಿಣದ ಅಂಶ ಇರುವುದರಿಂದ ಕಣ್ಣಿಗೆ ಒಳ್ಳೆಯದು.
ಮಾವಿನಕಾಯಿ ಪಚ್ಚಿಡಿ
ಬೇಕಾಗುವ ಸಾಮಗ್ರಿಗಳು
ಮಾವಿನಕಾಯಿ - 1
ಸಾಸಿವೆ – 11/2 ಚಮಚ
ಉದ್ದಿನ ಬೇಳೆ – 1/2 ಚಮಚ
ಇಂಗು – ಚಿಟಿಕೆ
ಮೆಂತೆ – 1 ಚಮಚ
ಮೆಣಸಿನ ಪುಡಿ – 1ಚಮಚ
ಅರಿಶಿನ ಪುಡಿ -1/2 ಚಮಚ
ರುಚಿಗೆ ತಕ್ಕಷ್ಟು ಉಪ್ಪು
ಎಣ್ಣೆ
ಬೆಲ್ಲ – 1 ಸಣ್ಣ ತುಂಡು
ಮಾಡುವ ವಿಧಾನ
ಮೊದಲಿಗೆ ಬಾಣಲೆ ಬಿಸಿ ಮಾಡಿ ಸಾಸಿವೆ 1 ಚಮಚ, ಮೆಂತೆ 1 ಚಮಚ ಹಾಕಿ ಹುರಿದು ಹುಡಿ ಮಾಡಿಕೊಳ್ಳಿ.
ನಂತರ ಮಾವಿನ ಕಾಯಿಯನ್ನು ಚಿಕ್ಕ ತುಂಡುಗಳಾಗಿ ಕತ್ತರಿಸಿ ಇಟ್ಟು ಕೊಳ್ಳಿ.
ಈಗ ಬಾಣಲೆಗೆ ಎಣ್ಣೆ ಹಾಕಿ, ಸಾಸಿವೆ ಉದ್ದಿನ ಬೇಳೆ, ಇಂಗಿನ ಒಗ್ಗರಣೆ ಕೊಡಿ. ನಂತರ ಅದಕ್ಕೆ ಕತ್ತರಿಸಿದ ಮಾವಿನಕಾಯಿ ತುಂಡುಗಳನ್ನು ಸೇರಿಸಿ, ಚೆನ್ನಾಗಿ ಬೆರೆಸಿ.
ಮಾವಿನಕಾಯಿ ಬಾಡಿಸಿದ ನಂತರ ಮೆಣಸಿನ ಪುಡಿ, ಅರಿಶಿನ ಪುಡಿ, ಉಪ್ಪು ಹಾಕಿ ಚೆನ್ನಾಗಿ ಕಲಸಿ. ಈಗ ಸ್ವಲ್ಪ ನೀರು ಸೇರಿಸಿ ಬೇಯಲು ಬಿಡಿ. ಬೆಂದ ಮೇಲೆ ಬೆಲ್ಲ ಹಾಕಿ ಕಲಸಿ. ಬೆಲ್ಲ ಕರಗುವವರೆಗೂ ಬೇಯಿಸಿ ಕೆಳಗಿಳಿಸಿ.
ಈಗ ಮಾವಿನಕಾಯಿ ಪಚ್ಚಿಡಿ ಸವಿಯಲು ಸಿದ್ಧವಾಗಿದೆ.
ಮಾವಿನ ಪದಾರ್ಥ (ಮಾವಿನ ಹಣ್ಣಿನ ಸಾಸಿವೆ)
ಬೇಕಾಗುವ ಸಾಮಗ್ರಿಗಳು
ಮಾಗಿದ ಮಾವಿನ ಹಣ್ಣು – 4
ತುರಿದ ತೆಂಗಿನಕಾಯಿ 1/2 ಕಪ್
ಎಣ್ಣೆ – 2 ಚಮಚ
ಸಾಸಿವೆ -1/2 ಚಮಚ
ಅರಿಶಿನ -1/4 ಚಮಚ
ಬೆಲ್ಲ – 1/2 ಕಪ್
ಕಾಶ್ಮೀರಿ ಮೆಣಸು – 3
ಬ್ಯಾಡಗಿ ಮೆಣಸು – 3
ಹುಣಸೆ ಹಣ್ಣಿನ ರಸ -2 ಚಮಚ
ರುಚಿಗೆ ತಕ್ಕಷ್ಟು ಉಪ್ಪು
ಒಗ್ಗರಣೆಗೆ
ಎಣ್ಣೆ – 2 ಚಮಚ
ಸಾಸಿವೆ -1/4 ಚಮಚ
ಕರಿಬೇವಿನ ಸೊಪ್ಪು – ಸ್ವಲ್ಪ
ಇಂಗು -ಚಿಟಕಿಯಷ್ಟು
ಮಾಡುವ ವಿಧಾನ
ಮಾಗಿದ ಮಾವಿನ ಹಣ್ಣುಗಳನ್ನು ತೆಗೆದುಕೊಳ್ಳಿ. ನಂತರ ಮಾವಿನ ಹಣ್ಣಿನ ಸಿಪ್ಪೆ ತೆಗೆದು ಪಕ್ಕಕ್ಕೆ ಇರಿಸಿಕೊಳ್ಳಿ.
ಈಗ ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ. ನಂತರ ಕಾಶ್ಮೀರಿ ಮತ್ತು ಬ್ಯಾಡಗಿ ಮೆಣಸನ್ನು ಸೇರಿಸಿ ಹುರಿದು ಪಕ್ಕದಲ್ಲಿ ಇಡಿ
ಈ ಬಾಣಲೆಗೆ ಸಾಸಿವೆ, ತುರಿದ ತೆಂಗಿನಕಾಯಿ, ಅರಿಶಿನವನ್ನು ಸೇರಿಸಿ ಹುರಿಯಿರಿ.
ನಂತರ ಇದಕ್ಕೆ ಹುರಿದಿಟ್ಟುಕೊಂಡ ಮೆಣಸು, ಹುಣಸೆ ರಸ ಸೇರಿಸಿ, ಮಿಕ್ಸಿ ಜಾರಿಗೆ ಹಾಕಿ ತರಿ ತರಿಯಾಗಿ ಗ್ರೈಂಡ್ ಮಾಡಿ ಪಕ್ಕದಲ್ಲಿ ಇರಿಸಿ.
ಸಿಪ್ಪೆ ತೆಗೆದಿಟ್ಟುಕೊಂಡ ಮಾವಿನ ಹಣ್ಣುಗಳನ್ನು ಬೆಲ್ಲದೊಂದಿಗೆ ಸ್ವಲ್ಪ ನೀರಿನಲ್ಲಿ ಕುದಿಸಿ. ಈಗ ಅದಕ್ಕೆ ಗ್ರೈಂಡ್ ಮಾಡಿಟ್ಟುಕೊಂಡ ಮಸಾಲೆಯನ್ನು ಸೇರಿಸಿ. ಅಗತ್ಯವಿರುವಷ್ಟು ನೀರನ್ನು ಸೇರಿಸಿ. ಗ್ರೇವಿಯ ದಪ್ಪವನ್ನು ಹೊಂದಿಸಿ. ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ.
ಸಾಸಿವೆ, ಇಂಗು ಮತ್ತು ಕರಿಬೇವಿನ ಸೊಪ್ಪಿನ ಒಗ್ಗರಣೆ ಕೊಡಿ.
ಕಾಳು ಮೆಣಸು ಸಾರು (ಬಾಣಂತಿ ಸಾರು)
ಬೇಕಾಗುವ ಸಾಮಗ್ರಿಗಳು
ಧನಿಯಾ ಕಾಳು – 1ಚಮಚ
ಕಾಳು ಮೆಣಸು – 2 ಚಮಚ
ಜೀರಿಗೆ – 1/4 ಟೀ ಚಮಚ
ಓಂ ಕಾಳು – 1/4 ಚಮಚ
ಒಣ ಮೆಣಸಿನಕಾಯಿ ( ಬ್ಯಾಡಗಿ ಮೆಣಸು) – 10
ಬೆಳ್ಳುಳ್ಳಿ – 1 ಗಡ್ಡೆ
ಈರುಳ್ಳಿ – 1/4 ಭಾಗ
ಹುಣಸೆ ಹುಳಿ – ಸ್ವಲ್ಪ
ಮಾಡುವ ವಿಧಾನ
ಮೊದಲಿಗೆ ಹುಣಸೆ ಹುಳಿಯನ್ನು ಬಿಸಿನೀರಿನಲ್ಲಿ ನೆನೆಸಿಡಿ.
ನಂತರ ಎಲ್ಲಾ ಮಸಾಲಾ ಪದಾರ್ಥಗಳನ್ನು ಎಣ್ಣೆ ಹಾಕದೆ ಮಂದ ಉರಿಯಲ್ಲಿ ಚೆನ್ನಾಗಿ ಹುರಿಯಿರಿ. ನಂತರ ಈರುಳ್ಳಿ ಮತ್ತು ಬೆಳ್ಳುಳ್ಳಿಗಳನ್ನು ಪ್ರತ್ಯೇಕವಾಗಿ ಎಣ್ಣೆ ಹಾಕದೆ ಕೆಂಪಗೆ ಆಗುವವರೆಗೆ ಹುರಿಯಿರಿ. ಎಲ್ಲಾ ಮಸಾಲೆ ಪದಾರ್ಥಗಳು ತಣ್ಣಗಾದ ಮೇಲೆ ಮಿಕ್ಸಿ ಜಾರಿಗೆ ಹಾಕಿ ನುಣ್ಣಗೆ ರುಬ್ಬಿ.ಅದಕ್ಕೆ 2 ಚಮಚ ಕೊಬ್ಬರಿ ತುರಿಯನ್ನು ಸೇರಿಸಿ ಪುನಃ ರುಬ್ಬಿ. ನಂತರ ನೆನೆಸಿದ ಹುಣಸೆ ಹುಳಿಯನ್ನು ಚೆನ್ನಾಗಿ ಕಿವುಚಿ ರಸ ತೆಗೆದು ರುಬ್ಬಿದ ಮಿಶ್ರಣಕ್ಕೆ ಬೆರೆಸಿ. ಬಳಿಕ ಚೆನ್ನಾಗಿ ಕುದಿಸಿ. ನಂತರ ಅದಕ್ಕೆ ತುಪ್ಪದಲ್ಲಿ, ಸಾಸಿವೆ, ಕರಿಬೇವು, ಒಣಮೆಣಸಿನ ಒಗ್ಗರಣೆ ಕೊಡಿ. ಈಗ ಆರೋಗ್ಯಕರ ಕಾಳು ಮೆಣಸು ಸಾರು ರೆಡಿಯಾಗಿದೆ. ಇದು ಜ್ವರ, ಶೀತ, ಕೆಮ್ಮು, ಮೈ ನೋವು ಇವುಗಳಿಂದ ದೂರವಿರಲು ನೆರವಾಗುತ್ತದೆ.
ರೆಸ್ಟೋರೆಂಟ್ ಸ್ಟೈಲ್ ಟಿಫಿನ್ ಸಾಂಬಾರು
ಬೇಕಾಗುವ ಪದಾರ್ಥಗಳು
½ ಕಪ್ ತೊಗರಿ ಬೇಳೆ /
½ ಕಪ್ ಹೆಸರು ಬೇಳೆ
½ ಟೀಸ್ಪೂನ್ ಅರಿಶಿನ ಪುಡಿ
ಸಾಂಬಾರು ಮಸಾಲಾಗೆ
1 ಟೀಸ್ಪೂನ್ ಕಡ್ಲೆಬೇಳೆ
1 ಟೀಸ್ಪೂನ್ ಕೊತ್ತಂಬರಿ ಬೀಜ
1 ಟೀಸ್ಪೂನ್ ಜೀರಿಗೆ
1 ಟೀಸ್ಪೂನ್ ಕರಿಮೆಣಸು
8-10 ಕರಿಬೇವಿನ ಸೊಪ್ಪು
1-2 ಟೀಸ್ಪೂನ್ ಮೆಂತ್ಯ
4-5 ಒಣ ಕೆಂಪು ಮೆಣಸು
1-2 ಟೀಸ್ಪೂನ್ ಎಣ್ಣೆ
ಇತರ ಪದಾರ್ಥಗಳು
½ ಕಪ್ ಕತ್ತರಿಸಿದ ಬದನೆಕಾಯಿ
½ ಕಪ್ ಕತ್ತರಿಸಿದ ಈರುಳ್ಳಿ
½ ಕಪ್ ಕತ್ತರಿಸಿದ ಆಲೂಗಡ್ಡೆ
1 ಕಪ್ ಕತ್ತರಿಸಿದ ಟೊಮ್ಯಾಟೊ
1 ಕಪ್ ಮಧ್ಯಮ ಗಾತ್ರದಲ್ಲಿ ಕತ್ತರಿಸಿದ ಕ್ಯಾರೆಟ್
1 ಕಪ್ ಕತ್ತರಿಸಿದ ನುಗ್ಗೆಕಾಯಿ (optional)
¼ ಕಪ್ ಕತ್ತರಿಸಿದ ಕುಂಬಳಕಾಯಿ (optional)
1-2 ಟೀಸ್ಪೂನ್ ಹುಣಸೆಹಣ್ಣಿನ ರಸ
1 ಸಣ್ಣ ತುಂಡು ಬೆಲ್ಲ
1 ಟೀಸ್ಪೂನ್ ಅರಿಶಿನ ಪುಡಿ
½ ಟೀಸ್ಪೂನ್ ಸಾಸಿವೆ
½ ಟೀಸ್ಪೂನ್ ಜೀರಿಗೆ
4-5 ಕರಿಬೇವಿನ ಸೊಪ್ಪು
1 ಟೀಸ್ಪೂನ್ ಉದ್ದಿನ ಬೇಳೆ
ಪಿಂಚ್ ಅಸಫೊಟಿಡಾ / ಹಿಂಗ್
ರುಚಿಗೆ ತಕ್ಕಷ್ಟು ಉಪ್ಪು
1 ಟೀಸ್ಪೂನ್ ಎಣ್ಣೆ
ಮಾಡುವ ವಿಧಾನ
ಸಾಂಬಾರು ಮಸಾಲಾಗೆ
ಸಣ್ಣ ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ.
ಜೀರಿಗೆ, ಕಡ್ಲೆಬೇಳೆ, ಮೆಂತ್ಯ ಬೀಜ ಸೇರಿಸಿ ಮತ್ತು ಕೆಲವು ಸೆಕೆಂಡುಗಳ ಕಾಲ ಹುರಿದ ನಂತರ ಒಣ ಕೆಂಪು ಮೆಣಸು, ಕರಿಬೇವಿನ ಸೊಪ್ಪು, ಕರಿಮೆಣಸು, ಕೊತ್ತಂಬರಿ ಬೀಜ ಸೇರಿದಂತೆ ಎಲ್ಲಾ ಮಸಾಲಾ ಪದಾರ್ಥಗಳನ್ನು ಸೇರಿಸಿ ಪರಿಮಳ ಬರುವ ತನಕ ಕೆಲವು ನಿಮಿಷಗಳ ಕಾಲ ಹುರಿಯಿರಿ.
ಇದನ್ನು ಕೆಲವು ನಿಮಿಷಗಳ ಕಾಲ ತಣ್ಣಗಾಗಲು ಬಿಡಿ. ನಂತರ ಅದನ್ನು ಬ್ಲೆಂಡರ್ ಅಥವಾ ಮಿಕ್ಸರ್ ಆಗಿ ನಯವಾಗಿ ನೀರು ಸೇರಿಸದೆ ಪುಡಿ ರೂಪದಲ್ಲಿ ಗ್ರೈಂಡ್ ಮಾಡಿ ಪಕ್ಕಕ್ಕೆ ಇರಿಸಿ.
ಎರಡೂ ಬೇಳೆಗಳನ್ನು 2-3 ಬಾರಿ ತೊಳೆಯಿರಿ. ನಂತರ ಅರಿಶಿನ ಪುಡಿ, ಅಗತ್ಯವಿರುವ ನೀರು (ಸುಮಾರು 2 ಕಪ್) ಸೇರಿಸಿ ತದನಂತರ ಬೇಯಿಸಿ.
ಬಳಿಕ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ನಂತರ ಜೀರಿಗೆ, ಸಾಸಿವೆ, ಒಣ ಕೆಂಪು ಮೆಣಸು, ಉದ್ದಿನ ಬೇಳೆ, ಕರಿಬೇವಿನ ಸೊಪ್ಪು, ಪಿಂಚ್ ಇಂಗು ಸೇರಿಸಿ, ಕೆಲವು ಸೆಕೆಂಡುಗಳ ಕಾಲ ಹುರಿಯಿರಿ.
ಈಗ ಕತ್ತರಿಸಿದ ಈರುಳ್ಳಿ ಸೇರಿಸಿ ಮತ್ತು ಗೋಲ್ಡನ್ ಬ್ರೌನ್ ಆಗುವವರೆಗೆ ಹುರಿಯಿರಿ. ನಂತರ ಕತ್ತರಿಸಿದ ಟೊಮ್ಯಾಟೊ ಸೇರಿಸಿ ಮತ್ತು ಮೃದುವಾಗುವವರೆಗೆ ಮತ್ತೆ ಹುರಿಯಿರಿ.
ನಂತರ ಅದಕ್ಕೆ ಕತ್ತರಿಸಿದ ಎಲ್ಲಾ ತರಕಾರಿಗಳನ್ನು ಸೇರಿಸಿ. ಈಗ ಅದಕ್ಕೆ ತಯಾರಿಸಿ ಇಟ್ಟುಕೊಂಡ ಸಾಂಬಾರು ಮಸಾಲಾ, ಉಪ್ಪು, ಅರಿಶಿನ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ಈ ಮಿಶ್ರಣಕ್ಕೆ 1 ಅಥವಾ 1 ½ ಕಪ್ ನೀರು ಸೇರಿಸಿ, ಅದನ್ನು ಕುದಿಸಿ, ಮುಚ್ಚಲ ಮುಚ್ಚಿ ತರಕಾರಿಗಳನ್ನು ಬೇಯಿಸಿ.
ತರಕಾರಿಗಳು ಬೆಂದ ನಂತರ ಹುಣಸೆ ರಸ, ಬೆಲ್ಲ, ಬೇಯಿಸಿದ ಬೇಳೆಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ಅದನ್ನು ಮಧ್ಯಮ ಉರಿಯಲ್ಲಿ 3 – 4 ತನಕ ಕುದಿಸಿ. ರೆಸ್ಟೋರೆಂಟ್ ಸ್ಟೈಲ್ ಟಿಫಿನ್ ಸಾಂಬಾರು ಸಿದ್ಧವಾಗಿದೆ.
ಇದಕ್ಕೆ ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಸೇರಿಸಿ. ಈ ಸಾಂಬಾರನ್ನು ಅನ್ನ, ದೋಸೆ, ಇಡ್ಲಿ ಜೊತೆ ಸವಿಯಲು ಚೆನ್ನಾಗಿರುತ್ತದೆ.