ಅರಬ್ಬಿ ಸಮುದ್ರದ ನೀಲ ಸಾಗರದ ನಟ್ಟ ನಡುವೆ ಶಾಂತವಾಗಿ ಕುಳಿತಿರುವ ಹಸಿರು ಸುಂದರಿ ನೇತ್ರಾಣಿ. ಇದು ಅಪರೂಪದ ಪಕ್ಷಿಗಳ ಸಾಗರ ಜೀವಿಗಳ, ಜಲಚರಗಳ ಆವಾಸ ಸ್ಥಾನ. ಇಲ್ಲಿ ಸಾವಿರಾರು ಸಂಖ್ಯೆಯ ಸಮುದ್ರಜೀವಿಗಳಿವೆ, ಅಪರೂಪದ ಹವಳದ ದಂಡೆಗಳಿವೆ. ಇಲ್ಲಿ ಸೀಬರ್ಡ್ ನೌಕಾನೆಲೆಯ ಯೋಧರು ಆಗಾಗ ಸಮರಾಭ್ಯಾಸ ನಡೆಸ್ತಾರೆ. ಹೀಗಾಗಿ ಇಲ್ಲಿನ ಸಮುದ್ರ ಜೀವ ಪರಿಸರಕ್ಕೆ ಧಕ್ಕೆ ಆಗ್ತಿದೆ ಎಂದು ಪರಿಸರ ವಿಜ್ಞಾನಿ ಒಬ್ಬರು ಕಳೆದ ಒಂದು ದಶಕದಿಂದ ಏಕಾಂಗಿಯಾಗಿ ಹೋರಾಟ ಮಾಡ್ತಿದ್ದಾರೆ. ಇದೇ ನೇತ್ರಾಣಿಯಲ್ಲಿ ಈಗ ಉತ್ತರ ಕನ್ನಡ ಜಿಲ್ಲಾಡಳಿತ ಸ್ಕೂಬಾ ಡೈವಿಂಗ್‌ಗೆ ಅನುಮತಿ ಕೊಟ್ಟಿದೆ.
ನೇತ್ರಾಣಿ, ಅರಬ್ಬೀ ಸಮುದ್ರದಲ್ಲಿರುವ ಈ ದ್ವೀಪವನ್ನು ಹಿಂದೆ ಪಿಜನ್ ಐಲ್ಯಾಂಡ್ ಅಥವಾ ಪಾರಿವಾಳ ದ್ವೀಪ ಅಂತ ಕರೆಯಲಾಗ್ತಿತ್ತು. ಈಗಲೂ ಇಲ್ಲಿ ಲಕ್ಷಾಂತರ ಪಾರಿವಾಳಗಳ ಸಹಜ ವಾಸಸ್ಥಾನವಿದೆ. ಐತಿಹಾಸಿಕವಾಗಿಯೂ ನೇತ್ರಾಣಿ ದ್ವೀಪಕ್ಕೆ ತನ್ನದೇ ಆದ ವಿಶೇಷತೆಗಳಿವೆ. ಕಾಳುಮೆಣಸಿನ ರಾಣಿ ಎಂದೇ ಖ್ಯಾತಳಾಗಿರುವ ಕಾನೂರು ಕೋಟೆ ಅಥವಾ ಸಂಗೀತಪುರ ಸಂಸ್ಥಾನದ ಜೈನರಾಣಿ ಚೆನ್ನಭೈರಾದೇವಿಯ ಕಾಲದಲ್ಲಿ, ಅವಳ ಆಸ್ಥಾನದಲ್ಲಿ ಭದ್ರತೆಗಾಗಿ ನಿಯೋಜನೆಗೊಂಡಿದ್ದ ಗೊಂಡರು ಅನ್ನುವ ಆದಿವಾಸಿಗಳ ಕಾರ್ಯಕ್ಷೇತ್ರವಾಗಿತ್ತು ಈ ನೇತ್ರಾಣಿ ದ್ವೀಪ.
ಉತ್ತರ ಕನ್ನಡ ಜಿಲ್ಲೆ ಪ್ರವಾಸಿ ತಾಣ ಮುರುಡೇಶ್ವರದಿಂದ ಸುಮಾರು 10 ಕಿ.ಮೀ ದೂರದಲ್ಲಿದೆ ನೇತ್ರಾಣಿ ಗುಡ್ಡ. ನೀಲಸಾಗರದ ನಡುವಿರುವ ಈ ದ್ವೀಪದಲ್ಲಿ ಪಾರಿವಾಳಗಳಲ್ಲದೆ, ಅತಿ ಹೆಚ್ಚು ಪ್ರಮಾಣದಲ್ಲಿ ಕಾಡು ಮೇಕೆಗಳಿವೆ. ನೇತ್ರಾಣಿ ದ್ವೀಪ ಜಿಲ್ಲಾ ಕೇಂದ್ರ ಕಾರವಾರದಿಂದ 130 ಕಿ.ಮೀ. ದೂರದಲ್ಲಿದೆ. ಮುರುಡೇಶ್ವರದಿಂದ ಸಮುದ್ರದಲ್ಲಿ ಒಂದೂವರೆ ತಾಸಿನಲ್ಲಿ 17 ಕಿ.ಮೀ. ಪಯಣಿಸಿದರೆ ನೇತ್ರಾಣಿಯ ಮುಖ ದರ್ಶನವಾಗುತ್ತದೆ. ಸಾಗರವಾಸಿಗಳಿಗೆ, ಸಮುದ್ರ ಪರಿಸರ ಸೌಂದರ್ಯವನ್ನು ಆಸ್ವಾದಿಸುವವರಿಗೆ, ಸಾಹಸ ಪ್ರಿಯರಿಗೆ ಹಾಗೂ ಮೀನುಗಾರರಿಗೆ ಈ ನೇತ್ರಾಣಿ ದ್ವೀಪವೆಂದರೆ ಅಚ್ಚುಮೆಚ್ಚು.
ಶಿವನ ಕಣ್ಣು ಅನ್ನುವ ಉಪಮೆ ಹೊಂದಿರುವ ನೇತ್ರಾಣಿ ದ್ವೀಪದಲ್ಲಿ ಎಣಿಕೆಗೆ ಸಿಗದಷ್ಟು ಹಲವು ಜಾತಿಯ ಪಾರಿವಾಳಗಳು ವಾಸ ಮಾಡ್ತಿವೆ. ಇಲ್ಲಿ ಅಳಿವಿನಂಚಿನಲ್ಲಿರುವ ಕೆಲವು ಪಕ್ಷಿ ಸಂಕುಲಗಳೂ ಬೀಡು ಬಿಟ್ಟಿವೆ. ವೈಟ್ ಬೆಲ್ಲೀಡ್ ಸೀ ಏಗಲ್ ಅಥವಾ ಶ್ವೇತ ಕತ್ತಿನ ಸಮುದ್ರ ಗರುಡ ಹಾಗೂ ಎಡಿಬಲ್ ನೆಸ್ಟ್ ಸ್ವಿಫ್ಟ್ಲೆಟ್ಸ್ ಅಂತ ಕರೆಯುವ ಒಂದು ಭಗೆಯ ಪಕ್ಷಿಗಳು ಇಲ್ಲಿವೆ. ಇಲ್ಲಿರುವ ಗುಹೆಗಳಲ್ಲಿ ಗೂಡು ಕಟ್ಟಿರುವ ಸ್ವಿಫ್ಟ್ಲೆಟ್ಸ್ಗಳನ್ನು ಆಹಾರವಾಗಿ ಬಳಸಿಕೊಳ್ಳುವ ಹಿನ್ನೆಲೆಯಲ್ಲಿ ಇದರ ಕಳ್ಳಸಾಗಾಣಿಕೆ ಅವ್ಯಾಹತವಾಗಿ ನಡೀತಿತ್ತು. ಈಗ ಅದನ್ನು ನಿಷೇದಿಸಲಾಗಿದೆ.
ಇಲ್ಲಿನ ಸಾಗರ ಪರಿಸರದಲ್ಲಿ ಅತ್ಯಂತ ಶ್ರೀಮಂತ ಜೀವ ವೈವಿಧ್ಯತೆ ಇದೆ. ಇಲ್ಲಿ ಜಗತ್ತಿನಲ್ಲಿ ಎಲ್ಲಿಯೂ ಕಾಣಸಿಗದ ಅತಿ ಅಪರೂಪದ ಮೀನುಗಳಿವೆ. ಶಾರ್ಕ್ ಹಾಗೂ ಡಾಲ್ಫಿನ್ಗಳು ಇಲ್ಲಿಗೆ ಬಂದು ಹೋಗುತ್ತವೆ. ಇಲ್ಲಿನ ಆಳ ಸಾಗರದಲ್ಲಿ ಓರ್ಕಾ ಹಾಗೂ ನೀಲಿ ತಿಮಿಂಗಲವನ್ನು ಕಂಡ ಈಜುಗಾರರಿದ್ದಾರೆ. ವಿವಿಧ ರೀತಿಯ ಹವಳಗಳು, ಬರ್ರಾಕುಡ, ಬಟರ್ ಫ್ಲೈ ಫಿಶ್ ಅಥವಾ ಚಿಟ್ಟೆ ಮೀನು, ರೆಡ್ ಟೂತ್ ಟ್ರಿಗ್ಗರ್ ಫಿಶ್ ಅಥವಾ ಬಂದೂಕು ಮೀನು, ಜಾಕ್ಸ್ ಅಥವಾ ಗಿಳಿ ಮೀನು, ಕೋಬಿಯಾ ಅಥವಾ ಹಾವು ಮೀನು, ಸ್ನಾಪರ್ಸ್, ಇಂಡಿಯನ್ ಬ್ಯಾನರ್ ಫಿಶ್ ಮತ್ತು ಸೀಗಡಿ ಮೀನುಗಳು ಈ ಪ್ರದೇಶದಲ್ಲಿ ಹೇರಳವಾಗಿವೆ.
ನೇತ್ರಾಣಿ ದ್ವೀಪ ಸರ್ವ ಧರ್ಮಗಳ ಸಮನ್ವಯ ಕೇಂದ್ರವೂ ಹೌದು. ಇಲ್ಲಿ ಹಿಂದೂಗಳ ಜಟ್ಟಿಗನ ಮೂರ್ತಿ, ನೇತ್ರ ಹೈಗುಳಿ ಮುಂತಾದ ದೇವರುಗಳಿವೆ. ಕ್ರೈಸ್ತ ಹಾಗೂ ಮುಸ್ಲೀಂ ಧರ್ಮೀಯರ ಪ್ರಾರ್ಥನಾ ಮಂದಿರಗಳು ಈ ದ್ವೀಪದಲ್ಲಿವೆ. ಹಿಂದೊಮ್ಮೆ ಈ ನೇತ್ರಾಣಿಯ ಬಗ್ಗೆ ಭಯ ಹುಟ್ಟಿಸುವ ಕಟ್ಟು ಕಥೆಗಳನ್ನೂ ಹುಟ್ಟಿಸಿ ಬಿಡಲಾಗಿತ್ತು.
ಹಿಂದೊಂದು ಕಾಲದಲ್ಲಿ ನೇತ್ರಾಣಿ ದ್ವೀಪಕ್ಕೆ ಹೋಗಲು ಜನ ಹೆದರುತ್ತಿದ್ದರಂತೆ. ಇದು ಭೂತಗಳ ಆವಾಸ ಸ್ಥಾನ, ಇಲ್ಲಿ ಹಲವು ಭೂತಗಳ ಸಂಚಾರವಿದೆ ಅನ್ನುವ ಕಟ್ಟು ಕಥೆಗಳು ಚಾಲ್ತಿಯಲ್ಲಿದ್ದವಂತೆ. ಹೀಗಾಗಿ ಆ ಭೂತಗಳನ್ನು ಸಂಪ್ರೀತಗೊಳಿಸಲು ಕುರಿ, ಕೋಳಿಗಳನ್ನು ಬಿಟ್ಟು ಬರುವ ಪರಿಪಾಠವಿತ್ತಂತೆ. ಈಗ ಇಲ್ಲಿ ಪ್ರಾಣಿ ವಧೆ ನಿಷೇದ ಇರುವ ಕಾರಣ ಬಲಿಗಾಗಿ ತೆಗೆದುಕೊಂಡ ಹೋದ ಮೇಕೆಗಳನ್ನು ಅಲ್ಲಿಯೇ ಬಿಟ್ಟು ಬರಲಾಗುತ್ತದೆ.
ನೇತ್ರಾಣಿ ಪ್ರಮುಖ ಧಾರ್ಮಿಕ ಕ್ಷೇತ್ರವೂ ಹೌದು. ಇಲ್ಲಿ ಜಟ್ಟಿಗ, ನೇತ್ರ ಹೈಗುಳಿ ಸೇರಿದಂತೆ ಅನೇಕ ದೇವರುಗಳ ಮೂರ್ತಿ ಇದೆ. ಸಮುದ್ರದಲ್ಲಿ ತಮಗೆ ಅಪಾಯವಾಗದಿರಲಿ, ದುಡಿಮೆ ಚೆನ್ನಾಗಿರಲಿ ಅಂತ ನೇತ್ರಾಣಿ ದೇವರಿಗೆ ಹರಕೆ ಹೊರುವ ಸಂಪ್ರದಾಯ ಈಗಲೂ ಇಲ್ಲಿನ ಮೀನುಗಾರರಲ್ಲಿದೆ. ಇಲ್ಲಿನ ದೇವರುಗಳಿಗೆ ಕುರಿ, ಕೋಳಿ, ಆಡುಗಳನ್ನು ಹರಕೆ ಬಿಡುವುದು ವಾಡಿಕೆ. ಆದರೀಗ ಇಲ್ಲಿ ಪ್ರಾಣಿ ಬಲಿ ನಿಷೇಧಿಸಲಾಗಿದೆ. ಈ ಬೆಟ್ಟದ ಮೇಲೆ ನಾಲ್ಕಾರು ಕರಿಕಲ್ಲಿನ ದೇವರ ಮೂರ್ತಿಗಳು, ಯೇಸುವಿನ ಶಿಲುಬೆ, ಗೋರಿಗಳಿವೆ ಈ ಮೂಲಕ ಸರ್ವಧರ್ಮಗಳ ಸಮನ್ವಯತೆಯನ್ನು ನೇತ್ರಾಣಿ ಸಾರುತ್ತದೆ.
ಈ ನೇತ್ರಾಣಿ ದ್ವೀಪ ವಿವಾದದ ಕೇಂದ್ರ ಬಿಂದು ಆಗಲು ಕಾರಣವಾಗಿದ್ದು ಭಾರತೀಯ ನೌಕಾ ದಳ ಇಲ್ಲಿ ಆರಂಭಿಸಿದ ಟಾರ್ಗೆಟ್ ಪ್ರಾಕ್ಟೀಸ್. ಇದನ್ನು ವಿರೋಧಿಸಿ ಸಾಗರ ಪರಿಸರ ಹಾಗೂ ಜೀವ ವಿಜ್ಞಾನದ ಪ್ರೊಫೇಸರ್ ಆಗಿದ್ದ ವಿ.ಎನ್ ನಾಯಕ್ ಕಳೆದ 13 ವರ್ಷಗಳಿಂದ ನಿರಂತರ ಹೋರಾಟ ನಡೆಸಿಕೊಂಡು ಬಂದಿದ್ದಾರೆ.
ಲಕ್ಷದ್ವೀಪ ಹೊರತುಪಡಿಸಿದರೆ ನೇತ್ರಾಣಿಯಲ್ಲಿ ವಿಫುಲವಾಗಿರುವ ಹವಳದ ದಂಡೆಗಳು ನೇತ್ರಾಣಿ ಸ್ವಚ್ಛ, ಪರಿಶುದ್ಧ ಸಾಗರ ಪರಿಸರದ ಮಹತ್ವವನ್ನು ಸಾರುತ್ತವೆ. ಇದು ಮೀನುಗಾರರಿಗೆ, ಸಾಹಸ ಪ್ರಿಯರಿಗೆ, ಊದುಗೊಳವೆ ಹಾಕಿ ಈಜುವ ಈಜುಪಟುಗಳಿಗೆ ಮತ್ತು ಸಾಗರ ಜೀವಶಾಸ್ತ್ರ ಅಧ್ಯಯನ ಮಾಡುವವರಿಗೆ ನೆಚ್ಚಿನ ತಾಣ. ಆದ್ರೆ ಈ ನೇತ್ರಾಣಿಯ ಮೇಲೆ ಕಣ್ಣು ಹಾಕಿ ಅಧಿಪತ್ಯ ಸಾಧಿಸಿದ್ದು ಮಾತ್ರ ಭಾರತೀಯ ನೌಕಾ ದಳ.
ಕಾರವಾರದ ಸೀಬರ್ಡ್ ನೌಕಾ ನೆಲೆಯ ಯೋಧರು ತಮ್ಮ ಟಾರ್ಗೆಟ್ ಪ್ರಾಕ್ಟೀಸ್ ಅಥವಾ ಸಮರಾಭ್ಯಾಸಕ್ಕೆ ಆಯ್ಕೆ ಮಾಡಿಕೊಂಡಿದ್ದು ಈ ನೇತ್ರಾಣಿ ದ್ವೀಪದ ಕಲ್ಲು ಬಂಡೆಗಳನ್ನು. ಈಗಲೂ ನೇತ್ರಾಣಿಯ ಪಕ್ಕದಲ್ಲಿರುವ ದ್ವೀಪವು ಭಾರತೀಯ ನೌಕಾಪಡೆಯಿಂದ ಗುರಿ ಅಭ್ಯಾಸಕ್ಕಾಗಿ ಬಳಸಲ್ಪಡುತ್ತದೆ. ಅಭ್ಯಾಸದ ನಂತರ ಇಲ್ಲಿನ ಪರಿಸರದಲ್ಲಿ ಖಾಲಿ ಗುಂಡುಗಳನ್ನು ಹಾಗೂ ಶೆಲ್ಗಳು ಬಿದ್ದಿರುತ್ತವೆ. ಯಾವುದೇ ಸಮಯದಲ್ಲಾದರೂ ಸ್ಪೋಟಿಸಬಹುದಾದ ಶೆಲ್ಗಳು ಬಂಡೆಗಳ ಪಕ್ಕದಲ್ಲಿ ಹಾಗೂ ಸಮುದ್ರದೊಳಗೂ ಬೀಳುತ್ತವೆ.
ನೇತ್ರಾಣಿ ದ್ವೀಪದ ಹಾಗೂ ಸುತ್ತಮುತ್ತಲಿನ ಸಾಗರ ಪರಿಸರಕ್ಕೆ ಧಕ್ಕೆ ಉಂಟು ಮಾಡ್ತಿರುವ ನೌಕಾನೆಲಯ ಸಮರಾಭ್ಯಾಸ ನಿಲ್ಲಬೇಕೆಂದು ಸತತ ಸುದೀರ್ಘ 13 ವರ್ಷಗಳಿಂದ ಹೋರಾಟ ನಡೆಸ್ತಾ ಬಂದಿರುವ ಪರಿಸರ ಪ್ರೇಮಿ ಕಾರವಾರದ ವಿ.ಎನ್ ನಾಯಕ್. ಸಾಗರ ಪರಿಸರ ಹಾಗೂ ಜೀವಶಾಸ್ತ್ರದ ಪ್ರೊಫೆಸರ್ ಆಗಿದ್ದ ನಾಯಕ್ ಸದ್ಯ ಉತ್ತರ ಕನ್ನಡ ವಿಜ್ಞಾನ ಸಂಘದ ಅಧ್ಯಕ್ಷರಾಗಿದ್ದಾರೆ. ಈ ನೇತ್ರಾಣಿಯಲ್ಲಿರುವ ಅಪರೂಪದ ಹಾಗೂ ಅಳಿವಿನಂಚಿನಲ್ಲಿರುವ ಜೀವಿಗಳು ಹಾಗೂ ಜಲಚರಗಳ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿದ್ದಾರೆ. ನಾಯಕ್ ಏಕಾಂಗಿಯಾಗಿ ಭಾರತೀಯ ನೌಕಾದಳದ ಟಾರ್ಗೆಟ್ ಪ್ರಾಕ್ಟೀಸ್ ವಿರುದ್ಧ ಧ್ವನಿ ಎತ್ತುತ್ತಲೇ ಬಂದಿದ್ದಾರೆ.
ನೌಕಾ ನೆಲೆಯವರು ಪ್ರತಿವರ್ಷ ಈ ಗುಡ್ಡದ ಮೇಲೆ ಬಾಂಬ್ ಸ್ಫೋಟ ಸೇರಿದಂತೆ ವಿವಿಧ ಶಸ್ತ್ರಾಸ್ತ್ರ ತರಬೇತಿ ನಡೆಸುತ್ತಾರೆ. ಆ ಸಂದರ್ಭದಲ್ಲಿ ಸಮುದ್ರದಲ್ಲಿ ಮೀನುಗಾರಿಕೆಗೆ ನಿಷೇಧ ಹೇರಲಾಗಿದೆ ಅನ್ನೋ ಪ್ರಕಟಣೆ ನೀಡಲಾಗುತ್ತದೆ. ಈ ಹಿಂದೆ ದ್ವೀಪದಲ್ಲಿ ಶಸ್ತ್ರಾಸ್ತ್ರ ತರಬೇತಿಗೆ ಪರಿಸರವಾದಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಎ.ಎನ್ ಕಾರ್ತಿಕ್, ಪಿ ಮಂಜುನಾಥ್, ಬಿ.ಆರ್ ದೀಪಕ್ ಮುಂತಾದ ಪರಿಸರ ಪ್ರೇಮಿಗಳು ಹೈ ಕೋರ್ಟ್ ಮೊರೆ ಹೋಗಿದ್ದರು.
ರಕ್ಷಣಾ ಇಲಾಖೆ ನೇತ್ರಾಣಿಯನ್ನು ಗುರಿ ತಾಣವಾಗಿ ಬಳಸೋದ್ರಿಂದ ಸ್ಥಳೀಯ ಪರಿಸರ ಹಾಗೂ ಜಲಚರಗಳಿಗೆ ಹಾನಿ ಆಗ್ತಿದೆ. ಇಲ್ಲಿನ ಹವಳದ ದಂಡೆಗಳಿಗೆ ಹಾಗೂ ಅಳಿವನಂಚಿನಲ್ಲಿರುವ ಜೀವಪ್ರಬೇಧಗಳಿಗೆ ಧಕ್ಕೆ ಉಂಟಾಗ್ತಿದೆ. ಕೂಡಲೇ ಚಟುವಟಿಕೆಗೆ ಇದಕ್ಕೆ ತಡೆ ಹಾಕುವಂತೆ ನಿರ್ದೇಶನ ಕೋರಿ ಹೈ ಕೋರ್ಟ್ನಲ್ಲಿ ಮುಖ್ಯನ್ಯಾಯಮೂರ್ತಿ ವಿಕ್ರಮ್‌ಜಿತ್ ಸೇನ್ ಹಾಗೂ ನ್ಯಾ.ಬಿ.ವಿ.ನಾಗರತ್ನ ಅವರಿದ್ದ ವಿಭಾಗೀಯ ಪೀಠಕ್ಕೆ ಅಪೀಲು ಸಲ್ಲಿಸಲಾಗಿತ್ತು. ಈ ವೇಳೆ ರಕ್ಷಣ ಇಲಾಖೆ ಬಾಂಬ್ ದಾಳಿಯ ತಾಲೀಮಿಗೆ ಬಳಸುವ ಕುರಿತು ಆಕ್ಷೇಪಣೆ ಸಲ್ಲಿಸಲು ಜೀವ ವೈವಿಧ್ಯ ಮಂಡಳಿಗೆ ಹೈಕೋರ್ಟ್ ಆದೇಶ ಸಹ ನೀಡಿತ್ತು.
ಗುರಿ ತಾಣವಾಗಿ ಬಳಕೆಯಾಗುತ್ತಿರುವ ನೇತ್ರಾಣಿ ದ್ವೀಪದಲ್ಲಿ ಜನವಸತಿ ಇಲ್ಲ. ತರಬೇತಿ ಸಮಯದಲ್ಲಿ ರಾಸಾಯನಿಕಯುಕ್ತ ಉಪಕರಣ ಬಳಸುತ್ತಿಲ್ಲ. ಈವರೆಗೆ ಯಾವೊಬ್ಬ ವ್ಯಕ್ತಿಯೂ ಸತ್ತಿಲ್ಲ. ತರಬೇತಿ ವೇಳೆ ಎಲ್ಲ ರೀತಿಯ ಮುನ್ನೆಚ್ಚರಿಕೆ ಕೈಗೊಂಡಿರುವುದರಿಂದ ಯಾರಿಗೂ ಸಮಸ್ಯೆ ಆಗದಂತೆ ಎಚ್ಚರ ವಹಿಸಿದ್ದೇವೆ ಅನ್ನೋ ಮಾಹಿತಿಯನ್ನು ರಕ್ಷಣಾ ಇಲಾಖೆ ಪರ ವಕೀಲರು ನ್ಯಾಯಪೀಠಕ್ಕೆ ಸಲ್ಲಿಸಿದ್ದರು.
ಇದಕ್ಕೆ ಆಕ್ಷೇಪಿಸಿದ್ದ ಅರ್ಜಿದಾರ ಪರ ವಕೀಲರು, ಗುರಿ ಚಟುವಟಿಕೆ ನಡೆಸುವ ವೇಳೆ ದ್ವೀಪದ ಬಳಿಯ ಸಮುದ್ರದ ಉಷ್ಣಾಂಶ 29 ಡಿಗ್ರಿಯಿಂದ 500 ಡಿಗ್ರಿಗೆ ಹೆಚ್ಚುತ್ತದೆ. ಇದರಿಂದ ನಾನಾ ಜಲಚರ, ಪಕ್ಷಿಗಳ ಜೀವಕ್ಕೆ ಕುತ್ತು ತಂದಿದೆ. ಕೆಲ ವರ್ಷಗಳ ಹಿಂದೆ ಶೆಲ್‌ವೊಂದು ಸ್ಫೋಟಿಸಿ ನಾಲ್ಕಾರು ಮಕ್ಕಳು ಸಾವಿಗೀಡಾಗಿದ್ದರು. ಇನ್ನು ಇದರಿಂದ ಸ್ಥಳೀಯ ಮೀನುಗಾರಿಕೆಗೂ ಅಡ್ಡಿಯಾಗಿದೆ ಅಂತ ವಾದ ಮಂಡಿಸಿದ್ದರು. ಕೆಲವು ಕಾಲದ ನಿಷೇಧದ ನಂತರ ಮತ್ತೆ ಯಥಾ ಪ್ರಕಾರ ನೇತ್ರಾಣಿಯಲ್ಲಿ ನೌಕಾದಳದ ಟಾರ್ಗೆಟ್ ಪ್ರಾಕ್ಟೀಸ್ ಮುಂದುವರೆಯಿತು.
ಬಯೋ ಡೈವರ್ಸಿಟಿ ಬೋರ್ಡ್ 2000ನೇ ಇಸವಿಯಲ್ಲಿ ನೇತ್ರಾಣಿ ದ್ವೀಪದಲ್ಲಿ ಸರ್ವೇ ನಡೆಸಿ ದ್ವೀಪದ ಸುತ್ತಲಿನ ಸಾಗರದಲ್ಲಿ ಸುಮಾರು ಶೇ.14.7ರಷ್ಟು ಹವಳದ ದಿಣ್ಣೆಗಳಿವೆ, ಶೇ. 2.7ರಷ್ಟು ಸ್ಪಂಜಿನಂತಹ ಶಿಲೀಂಧ್ರ ಜೀವಿಗಳು, ಶೇ 63.2ರಷ್ಟು ಆಲ್ಗೇ ಅಥವಾ ಪಾಚಿ, ಶೇ 13.3 ರಷ್ಟು ಪಾಲಿಚಾಟಸ್ ಹಾಗೂ ಶೇ. 0.3ರಷ್ಟು ಮ್ಯುಸೆಲ್ ಅಥವಾ ಕಪ್ಪೇಚಿಪ್ಪುಗಳಿವೆ ಅಂತ ವರದಿ ಮಾಡಿತ್ತು. ಆದ್ರೆ ಜೀವ ವೈವಿಧ್ಯತಾ ಮಂಡಳಿ ನಡೆಸಿದ ಸಮೀಕ್ಷೆ ಕೇವಲ ಶೇ 50 ರಷ್ಟು ಮಾತ್ರ ಅನ್ನುವ ಮಾತುಗಳೂ ಕೇಳಿ ಬಂದಿದ್ದವು.
ನೇತ್ರಾಣಿಯಲ್ಲಿ ಒಂದು ಕಡೆ ನಾವಿಕ ದಳದ ಟಾರ್ಗೆಟ್ ಪ್ರಾಕ್ಟೀಸ್ಗೆ ವಿರೋಧ ವ್ಯಕ್ತವಾಗ್ತಿದ್ರೆ, ಇನ್ನೊಂದು ಕಡೆ ಕಾರವಾರ ಜಿಲ್ಲಾಡಳಿತ ಈಗ ಅಲ್ಲಿ ಸ್ಕೂಬಾ ಡೈವಿಂಗ್‌ಗೆ ಅಧಿಕೃತ ಲೈಸೆನ್ಸ್ ನೀಡಿದೆ. ಇದು ನೇತ್ರಾಣಿಯ ಇನ್ನೊಂದು ವಿವಾಧ.
ನೇತ್ರಾಣಿಯ ಸ್ವಚ್ಛ ಶುದ್ಧ ಪಾರ್ದರ್ಶಕ ನೀರಿನ ಮೇಲ್ಮೈ ಸ್ಕೂಬಾ ಡೈವಿಂಗ್‌ಗೆ ಹೇಳಿ ಮಾಡಿಸದಂತಹ ಪ್ರಶಸ್ತ ಜಾಗ. ಈ ಹಿಂದೆ ಗೋವಾದಿಂದ ಬರ್ತಿದ್ದ ಪ್ರವಾಸಿಗರು ಅನಧಿಕೃತವಾಗಿ ಸ್ಕೂಬಾ ಡೈವಿಂಗ್ ನಡೆಸ್ತಿದ್ರು. ಆದ್ರೀಗ ನೇತ್ರಾಣಿಯಲ್ಲಿ ಸ್ಕೂಬಾ ಡೈವಿಂಗ್‌ಗೆ ಸ್ವತಃ ಉತ್ತರ ಕನ್ನಡ ಜಿಲ್ಲಾಡಳಿತವೇ ಅನುಮತಿ ನೀಡಿದೆ.
ನೇತ್ರಾಣಿ ದ್ವೀಪದ ಸುತ್ತಲಿನ ಕಡಲಾಳದ ಅಪೂರ್ವ ಜೀವ ಜಗತ್ತು ಅದ್ಭುತ. ಅಂಡಮಾನ್- ನಿಕೋಬಾರ್, ಲಕ್ಷದ್ವೀಪ, ಪಾಂಡಿಚೇರಿ ಹಾಗೂ ಗೋವಾ ಹೊರತುಪಡಿಸಿದ್ರೆ ಸ್ಕೂಬಾ ಡೈವಿಂಗ್‌ಗೆ ಹೇಳಿ ಮಾಡಿಸಿದ ತಾಣ ಈ ನೇತ್ರಾಣಿ. ಈ ಐ ಲ್ಯಾಂಡ್ ಸುತ್ತಲಿನ ದಟ್ಟನೀಲಿ ಬಣ್ಣದ ಸಮುದ್ರದಲ್ಲಿ ಪ್ರತೀನಿತ್ಯ ಸರಿ ಸುಮಾರು 9 ರಿಂದ 12 ಮೀಟರ್ ಆಳದವರೆಗೆ ಸಮುದ್ರದ ಸಂಪೂರ್ಣ ಪರಿಸರ ಕಾಣಿಸುತ್ತದೆ. ಆಮ್ಲಜನಕದ ಸಿಲಿಂಡರ್ ಸಹಾಯ ಪಡೆದು ಸಮುದ್ರದೊಳಗೆ ಪ್ರವೇಶಿಸಿದರೆ ಭಗೆಭಗೆಯ ವೈವಿಧ್ಯಮಯ ಮೀನು, ಸಾಗರ ಜೀವಿಗಳ ದರ್ಶನವಾಗುತ್ತದೆ. ಇದು ವಿದೇಶಿಯರನ್ನೂ ಸಹ ತೀವ್ರವಾಗಿ ಆಕರ್ಷಿಸುತ್ತಿದೆ.
ರವೀಂದ್ರನಾಥ ಟ್ಯಾಗೋರ್ ಕಡಲ ಸಂರಕ್ಷಣೆ ಮತ್ತು ಅಭಿವೃದ್ಧಿ ಸಮಿತಿ ಈಗಾಗಲೇ 3 ಖಾಸಗಿ ಕಂಪನಿಗಳಿಗೆ ಟೆಂಡರ್ ಮೂಲಕ ದ್ವೀಪದ ಸುತ್ತಲಿನ ಸಮುದ್ರದಲ್ಲಿ ನೇತ್ರಾಣಿಯಲ್ಲಿ ಸ್ಕೂಬಾ ಡೈವಿಂಗ್‌ಗೆ ಅನುಮತಿ ನೀಡಿದೆ. ಡೈವ್ ಗೋವಾ, ಮುಂಬಯಿನ ವೆಸ್ಟ್ ಕೋಸ್ಟ್ ಮತ್ತು ಮುರುಡೇಶ್ವರದ ನೇತ್ರಾಣಿ ಅಡ್ವೆಂಚರ್ ಸಂಸ್ಥೆಗಳು ಇದರ ಗುತ್ತಿಗೆ ಪಡೆದುಕೊಂಡಿವೆ. ಜಲ ಸಾಹಸ ಮತ್ತು ಜಲಚರ ಜೀವವೈವಿಧ್ಯತೆ ದರ್ಶನ ಈಗೀಗ ಸಾಕಷ್ಟು ಪ್ರವಾಸಿಗರನ್ನು ಸೆಳೆಯುತ್ತಿದೆ.
ನೇತ್ರಾಣಿಯಲ್ಲಿ ಅನಧಿಕೃತವಾಗಿ ಸ್ಕೂಬಾ ಡೈವಿಂಗ್ 10 ವರ್ಷದ ಹಿಂದೆಯೇ ಪ್ರಾರಂಭವಾಗಿತ್ತು. ಮುಂಬಯಿ ಮೂಲದ ಸಂಸ್ಥೆಯೊಂದು ಗೋವಾ ಪ್ರವಾಸಿಗರನ್ನು ವರ್ಷದಲ್ಲಿ ನಾಲ್ಕಾರು ಬಾರಿ ಸ್ಕೂಬಾ ಡೈವಿಂಗ್ ತರಬೇತಿಗೆ ಕರೆತರುತ್ತಿದ್ದರು. ಆದರೆ 4 ವರ್ಷಗಳಿಂದ ಇದು ಪೂರ್ಣವಾಗಿ ಸ್ಥಗಿತಗೊಂಡಿತ್ತು. ಅಂಡಮಾನ್ ನಿಕೋಬಾರ್, ಲಕ್ಷ ದ್ವೀಪದ ಸ್ಕೂಬಾ ಡೈವಿಂಗ್ ಗಮನಿಸಿದ್ದ ಹಿಂದೆ ಉತ್ತರಕನ್ನಡ ಜಲ್ಲೆಯ ಜಿಲ್ಲಾಧಿಕಾರಿಯಾಗಿದ್ದ ಎಸ್.ಎಸ್.ನಕುಲ್ ನೇತ್ರಾಣಿಯಲ್ಲಿ ಇದನ್ನು ಅಧಿಕೃತವಾಗಿ ನಡೆಸಲು ಆಸಕ್ತಿ ವಹಿಸಿದ್ರು. ಟೆಂಡರ್ ಕರೆದು ನುರಿತ ಸ್ಕೂಬಾ ಡೈವಿಂಗ್ ನಡೆಸುವ ಕಂಪನಿಗಳ ಮೂಲಕ ರಾಯಲ್ಟಿ ಕಟ್ಟಿಸಿಕೊಳ್ಳುವ ಕರಾರು ಮಾಡಿಕೊಳ್ಳಲಾಗಿದೆ. ಜಿಲ್ಲಾಡಳಿತದ ಬೀಚ್ ಅಭಿವೃದ್ಧಿ ಸಮಿತಿಗೆ ವಾರ್ಷಿಕವಾಗಿ ಮೂರು ಸ್ಕೂಬಾ ಡೈವಿಂಗ್ ಕಂಪನಿಗಳಿಂದ 16ರಿಂದ 20 ಲಕ್ಷ ರೂ. ಆದಾಯದ ನಿರೀಕ್ಷೆ ಇದೆ.
ಈ ಸ್ಕೂಬಾ ಡೈವಿಂಗ್ನಿಂದಾಗಿಯೂ ನೇತ್ರಾಣಿ ಸಾಗರದಾಳದ ಪರಿಸರಕ್ಕೆ ಧಕ್ಕೆ ಆಗ್ತಿದೆ ಅನ್ನೋದು ಪರಿಸರ ಪ್ರೇಮಿಗಳ ಅಸಮಧಾನಕ್ಕೆ ಕಾರಣವಾಗಿದೆ. ಇನ್ನು ಸ್ಕೂಬಾ ಡೈವಿಂಗ್ ಕಾರಣಕ್ಕೆ ಮೀನುಗಾರಿಕೆಗೂ ತೊಂದರೆ ಆಗ್ತಿದೆ ಅನ್ನೋ ಹಿನ್ನೆಲೆಯಲ್ಲಿ ಕೆಲವು ಕಾಲದ ಹಿಂದೆ ಸ್ಥಳೀಯ ಮೀನುಗಾರರು ಸ್ಕೂಬಾ ಡೈವಿಂಗ್‌ಗೆ ಕರೆದೊಯ್ಯುತ್ತಿದ್ದ ದೋಣಿಯನ್ನು ತಡೆದು ಪ್ರತಿಭಟನೆ ಸಹ ನಡೆಸಿದ್ದರು. ಸ್ಕೂಬಾ ಡೈವಿಂಗ್ನಿಂದ ಮೀನಿನ ಆಶ್ರಯ ತಾಣಗಳು ಹಾಗೂ ಸಂತಾನೋತ್ಪತ್ತಿಗೆ ತೊಂದರೆ ಆಗುತ್ತದೆ, ಇದ್ರಿಂದ ಮೀನುಗಾರಿಕೆಯ ಮೇಲೆ ನೇರವಾದ ಪರಿಣಾಮ ಉಂಟಾಗುತ್ತದೆ ಅಂತ ಮೀನುಗಾರರು ತಮ್ಮ ಅಸಮಧಾನ ವ್ಯಕ್ತಪಡಿಸಿದ್ದರು.
ಸದ್ಯ ಸ್ಕೂಬಾ ಡೈವಿಂಗ್‌ಗೆ ಕರೆದೊಯ್ಯುವ ಬೋಟ್‌ಗಳು ಲಂಗರು ಹಾಕುವಾಗ ಹವಳದ ದಿಬ್ಬಗಳಿಗೆ ಹಾನಿಯಾಗದಂತೆ 50 ಕೆಜಿ ತೂಕದ 6 ಸಿಮೆಂಟ್ ಬ್ಲಾಕ್ ಮಾಡಿ ನೀರಿನಾಳಕ್ಕೆ ಇಳಿಸಿ, ಅದಕ್ಕೆ ಶಾಶ್ವತವಾಗಿ ರೂಫ್ ಕಟ್ಟಲು ಚಿಂತನೆ ನಡೆದಿದೆ. ಬೋಟ್‌ಗಳ ನಿಲುಗಡೆಯ ಆ್ಯಂಕರ್ ಅಥವಾ ಲಂಗರು, ಹವಳದ ದಿನ್ನೆಗೆ ತಾಗದಂತೆ ಎಚ್ಚರ ವಹಿಸಲಾಗುತ್ತಿದೆ. ಜಿಲ್ಲಾಧಿಕಾರಿಗಳ ಮಧ್ಯಸ್ತಿಕೆಯಲ್ಲಿ ಸಂಧಾನವೂ ನಡೆದಿದೆ.
ನೇತ್ರಾಣಿಯ ವಿಶೇಷಗಳು ಹಲವಾರು. ಅದು ಕೇವಲ ಹವಳದ ದಿಬ್ಬಗಳು ಮಾತ್ರವಲ್ಲ, ದ್ವೀಪದ ಕೋಮು ಸೌಹಾರ್ಧ ಪ್ರಾರ್ಥನಾ ಮಂದಿರಗಳು ಮಾತ್ರವಲ್ಲ, ಅಥವಾ ಇಲ್ಲಿನ ಪಾರಿವಾಳಗಳು, ಅಳಿವನಂಚಿನಲ್ಲಿರುವ ಪಕ್ಷಿ ಪ್ರಬೇಧ, ಅಪರೂಪದ ಜಲಚರಗಳು, ಧಾರ್ಮಿಕ ಹಾಗೂ ಚಾರಿತ್ರಿಕ ಹಿನ್ನೆಲೆ ಇವಷ್ಟೆ ಅಲ್ಲ. ನೇತ್ರಾಣಿ ಇವೆಲ್ಲದರ ಹೊರತಾಗಿಯೂ ಸಹಜವಾಗಿ ಸ್ವಾಭಾವಿಕವಾಗಿ ನೈಸರ್ಗಿಕವಾಗಿ ಪ್ರಕೃತಿ ಪ್ರೇಮಿಗಳನ್ನು ಸೆಳೆಯುವ ಸಾಮರ್ಥ್ಯವಿರುವ ವಿಶೇಷ ದ್ವೀಪ..
ನೇತ್ರಾಣಿಯ ಸಂಪೂರ್ಣ ವಿವರದ ನಂತರ ಒಂದು ಗೊಂದಲ ಉದ್ಭವಿಸತ್ತೆ. ಅದು ಯಾರ ವಾದ ಸರಿ? ಪರಿಸರ ಹೋರಾಟಗಾರರ ಕಳಕಳಿಯೂ ಸರಿ. ಆದ್ರೆ ನೌಕಾ ದಳ ನಮ್ಮ ಸೈನ್ಯದ ಪರಿಪೂರ್ಣತೆಗಾಗಿ ಟಾರ್ಗೆಟ್ ಪ್ರಾಕ್ಟೀಸ್ ಮಾಡ್ತಿದೆ. ಸ್ಕೂಬಾ ಡೈವಿಂಗ್ ಮೂಲಕ ಇದೊಂದು ಅತ್ಯುತ್ತಮ ಪ್ರವಾಸಿ ತಾಣವಾಗ್ತಿದೆ. ಇದ್ರಿಂದಲೂ ಇಲ್ಲಿನ ಸಮುದ್ರ ಪರಿಸರಕ್ಕೆ ಧಕ್ಕೆ ಆಗುತ್ತದೆ ಅನ್ನುವ ವಾದ ತಳ್ಳಿ ಹಾಕುವಂತಿಲ್ಲ. ಒಟ್ನಲ್ಲಿ ನೇತ್ರಾಣಿಯ ಏಕಾಂಗಿ ಬೆಟ್ಟ ಹಾಗೂ ಕ್ರಿಸ್ಟಲ್ ಕ್ಲಿಯರ್ ಕಡಲಾಳ ವರವೋ ಶಾಪವೋ ಅನ್ನೋದಂತು ಯಕ್ಷಪ್ರಶ್ನೆಯಾಗಿ ಉಳಿದಿದೆ.
-ವಿಶ್ವಾಸ್ ಭಾರದ್ವಾಜ್ (ವಿಭಾ)