ಹೊಸದಿಲ್ಲಿ, ಮೇ 22 : ಜಗತ್ತಿನಾದ್ಯಂತ ಮರಣ ಮೃದಂಗ ಬಾರಿಸುತ್ತಿರುವ ಕೊರೊನಾ ವೈರಸ್ ಎಂಬ ಸಾಂಕ್ರಾಮಿಕ ರೋಗಕ್ಕೆ ಇಲ್ಲಿಯವರೆಗೆ ಯಾವ ಔಷಧಿ ಯನ್ನು ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಅನೇಕ ಸಂಶೋಧನಾ ಸಂಸ್ಥೆಗಳು ಕೊರೊನಾ ವಿರುದ್ಧ ಔಷಧಿ ಕಂಡು ಹಿಡಿಯಲು ಹಗಲಿರುಳು ಪ್ರಯತ್ನಿಸುತ್ತಿದೆ. ಹಲವಾರು ದೇಶಗಳ ಸಂಶೋಧಕರು ತಮ್ಮ ದೇಶಗಳಲ್ಲಿ ಪ್ರಚಲಿತವಿರುವ ಔಷಧಿಗಳು, ಗಿಡಮೂಲಿಕೆಗಳು ಹೀಗೆ ಪ್ರತಿಯೊಂದು ಪದಾರ್ಥಗಳ ಮೇಲೂ ಸಂಶೋಧನೆ ಮಾಡಲು ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಭಾರತ ಮತ್ತು ಜಪಾನ್ ದೇಶದ ಸಂಶೋಧಕರು ಜಂಟಿಯಾಗಿ ಭಾರತದ ಪ್ರಾಚೀನ ಯಶಸ್ವಿ ಆಯುರ್ವೇದ ಪದ್ದತಿಯಲ್ಲಿ ಬಳಸುವ ಅಶ್ವಗಂಧದ ಮೇಲೆ ಅಧ್ಯಯನ ಮಾಡಲು ಮುಂದಾಗಿದ್ದಾರೆ.
ದಿಲ್ಲಿ ಐಐಟಿ ಯ ಡೈಲ್ಯಾಬ್ ಮತ್ತು ಜಪಾನ್ನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಇಂಡಸ್ಟ್ರಿಯಲ್ ಸೈನ್ಸ್ ಅಂಡ್ ಟೆಕ್ನಾಲಜಿ (ಎ.ಐ.ಎಸ್.ಟಿ) ಜಂಟಿಯಾಗಿ ನಡೆಸಿದ ಸಂಶೋಧನೆಯಲ್ಲಿ ಅಶ್ವಗಂಧ ಮತ್ತು ಪ್ರೋಪೋಲಿಸ್ ಕೊರೋನಾ ಸೋಂಕಿನ ಚಿಕಿತ್ಸೆ ನೀಡಲು ಸಹಾಯ ಮಾಡುವ ಅಂಶಗಳನ್ನು ಒಳಗೊಂಡಿವೆ ಎಂದು ಹೇಳಲಾಗಿದೆ
ಅಶ್ವಗಂಧದಲ್ಲಿ ಕಂಡುಬರುವ ವಿಥಾನಿಯಾ ಸೊಮ್ನಿಫೆರಾ ಮತ್ತು ಪ್ರಪೋಲಿಸ್ ನಲ್ಲಿರುವ ಕೈಫಿಕ್ ಆಸಿಡ್ ಫಿನೋಥೈಲ್ ಈಸ್ಟರ್ ನಲ್ಲಿನ ಸಂಯುಕ್ತ ಘಟಕಗಳು ಕೊರೊನಾ ಸೋಂಕಿನ ವೈರಾಣುಗಳ ಸಶಕ್ತ ಪ್ರತಿರೋಧಕಗಳನ್ನು ಉತ್ಪಾದಿಸುತ್ತವೆ ಎಂದು ಸಾಬೀತಾಗಿದೆ. ಅಷ್ಟೇ ಅಲ್ಲ ಸೋಂಕನ್ನು ತಡೆಗಟ್ಟುವಲ್ಲಿ ಕೂಡ ಪರಿಣಾಮಕಾರಿಯಾಗಿದೆ ಎನ್ನಲಾಗಿದೆ.
ಕೋವಿಡ್-19 ವೈರಸ್ ಹೆಚ್ಚು ಆಕ್ರಮಣಕಾರಿಯಾಗಿರಲು ವೈರಾಣುಗಳಲ್ಲಿರುವ ಎಂಪ್ರೊ ಕಿಣ್ವಗಳು ಕಾರಣ. ಆದರೆ ಆಶ್ವಗಂಧದಲ್ಲಿರುವ ಘಟಕಗಳು ಎಂಪ್ರೊ ಕಿಣ್ವಗಳ ಆಕ್ರಮಣವನ್ನು ನಡೆಯಲು ಶಕ್ತವಾಗಿದೆ. ಪ್ರೊಪೊಲಿಸ್ ಎನ್ನುವುದು ಜೇನು ಹುಳದ ಒಂದು ಉತ್ಪನ್ನವಾಗಿದ್ದು, ಇದರಲ್ಲಿ ಆಂಟಿ – ಆಕ್ಸಿಡೆಂಟ್ ಅಂಶಗಳು ಹೇರಳವಾಗಿದೆ. ಇದು ಕಾಯಿಲೆಯಿಂದ ದೇಹದಲ್ಲಿ ಉಂಟಾಗುವ ಹಾನಿಯನ್ನು ಅತ್ಯಂತ ಪರಿಣಾಮಕಾರಿಯಾಗಿ ನಿವಾರಣೆ ಮಾಡಬಲ್ಲದು ಎಂದು ಐಐಟಿ ದೆಹಲಿಯ ಜೀವರಾಸಾಯನಿಕ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಪ್ರೊಫೆಸರ್ ಸುಂದರ್ ಅವರು ಹೇಳಿದ್ದಾರೆ.
ಐಐಟಿ ಯ ಡೈಲ್ಯಾಬ್ ಮತ್ತು ಜಪಾನ್ನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಇಂಡಸ್ಟ್ರಿಯಲ್ ಸೈನ್ಸ್ ಅಂಡ್ ಟೆಕ್ನಾಲಜಿ (ಎ.ಐ.ಎಸ್.ಟಿ) ಯ ವಿಜ್ಞಾನಿಗಳು ಕಳೆದ ಒಂದು ದಶಕದಿಂದ ಆಧುನಿಕ ತಂತ್ರಜ್ಞಾನದ ಸಹಾಯದಿಂದ ಆಯುರ್ವೇದದ ಹಾಗೂ ಪ್ರಾಚೀನ ಚಿಕಿತ್ಸಾ ಪದ್ಧತಿಯ ಮೇಲೆ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದ ಅವರು ಆಯುರ್ವೇದದಲ್ಲಿ ಆಶ್ವಗಂಧವು ಆ್ಯಂಟಿ ವೈರಲ್ ಔಷಧಿಯಾಗಿ ಬಳಕೆಯಲ್ಲಿದೆ ಎಂದು ತಿಳಿಸಿದ್ದಾರೆ
ಅಶ್ವಗಂಧವು ಪ್ರಾಥಮಿಕ ಹಂತದಲ್ಲಿ ಕೊರೋನಾಗೆ ಪರಿಣಾಮಕಾರಿ ಔಷಧಿಯಾಗಬಹುದು ಎಂದ ಪ್ರೊಫೆಸರ್ ಸುಂದರ್ ಇದರ ಬಗ್ಗೆ ಇನ್ನಷ್ಟು ಆಳದ ಅಧ್ಯಯನಗಳು ಆಗಬೇಕಿದೆ ಎಂದು ಹೇಳಿದ್ದಾರೆ.
ಕೊರೋನಾ ವೈರಸ್ ವಿರುದ್ಧ ಹೋರಾಡಲು ಇನ್ನೂ ಯಾವ ಔಷಧಿಯನ್ನು ಕಂಡು ಹುಡುಕಲು ಆಗಿಲ್ಲ. ಆದರೆ ಕೆಲವು ಸಂಶೋಧನೆಗಳು ಮಲೇರಿಯಾ ತಡೆಗಟ್ಟಲು ಬಳಸುವ ಹೈಡ್ರಾಕ್ಸಿಕ್ಲೋರುಕ್ವಿನ್ ಎಂಬ ಔಷಧಿ ಪರಿಣಾಮಕಾರಿಯಾಗಿದೆ ಎಂದು ತಿಳಿಸಿದೆ. ಹಾಗಾಗಿ ಭಾರತ ಸರ್ಕಾರ ಆಯುರ್ವೇದ ಪದ್ಧತಿಯಲ್ಲಿ ಬಳಸುವ ಅನೇಕ ಗಿಡಮೂಲಿಕೆಗಳಾದ ಅಶ್ವಗಂಧ, ಯಷ್ಟಿಮಧು, ಗುಡುಚಿ ಪಿಪ್ಪಲಿ ಇತ್ಯಾದಿಗಳು ಮಲೇರಿಯಾ ಔಷಧಕ್ಕೆ ಸರಿಸಮನಾಗಿ ಕೆಲಸ ಮಾಡಬಲ್ಲದೇ ಎಂಬ ವಿಚಾರವಾಗಿ ಸಂಶೋಧನೆ ನಡೆಸಲು ಅನುಮತಿ ಕೊಟ್ಟಿದೆ. ಅಷ್ಟೇ ಅಲ್ಲ ಭಾರತ ಸರ್ಕಾರವು ಆಯುಷ್ ಸಚಿವಾಲಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ವಿಶ್ವವಿದ್ಯಾಲಯ ಧನಸಹಾಯ ಆಯೋಗ ಮತ್ತು ಐಸಿಎಂಆರ್ ಸಹಾಯದಿಂದ ಅಶ್ವಗಂಧದ ಮೇಲೆ ಪ್ರಾಯೋಗಿಕ ಪರೀಕ್ಷೆಗಳನ್ನು ಪ್ರಾರಂಭಿಸಿದೆ.
ವಿಶ್ವವನ್ನೇ ಕಂಗೆಡಿಸಿರುವ ಕೊರೊನಾ ವೈರಸ್ ನ ನಿರ್ಮೂಲನೆ ಮಾಡುವಲ್ಲಿ ಅಶ್ವಗಂಧ ಯಶಸ್ವಿಯಾದರೆ ಪ್ರಪಂಚದ ಎಲ್ಲಾ ದೇಶಗಳ ಪಾಲಿಗೆ ಸಂಜೀವಿನಿಯಾಗಲಿದೆ








