ಕರೋನಾ ಮತ್ತು ನಾನು
ನಾನು ನಾನಾಗಿರುವ ನನ್ನ ಮನೋಧರ್ಮ ವನ್ನು ಮತ್ತಷ್ಟು ಹದಗೊಳಿಸಿ, ಜೀವನದ ಸತ್ಯಾಸತ್ಯತೆ ಹೃದ್ಯ ವಾಗುವಂತೆ ಮಾಡಿದ್ದು ಈ ಕರೋನ ಕಾಲ. “ಅನಾಯಾಸೇನ ಮರಣಂ” ಎಂಬಂತೆ ಆತ್ಮ ಮೋಕ್ಷ ಸೌಧವನ್ನೇರಬೇಕು ಎಂಬುದು ಎಲ್ಲರ ವಾಂಛೆ ಆಗಿದ್ದ ರೂ ಕೂಡಾ ಒಂದರೆಘಳಿಗೆ ರೋಗ ದ ಭೀತಿ ಮಾನವನನ್ನು ತಲ್ಲಣಿಸದಿರದು.
ನನ್ನ ಬದುಕಿನ ನೋವನನ್ನೆಲ್ಲಾ ಯಾವುದೋ ಮಾಧ್ಯಮದಿಂದ ಮರೆಯುತ್ತಾ…ಅದೇ ಗುಂಗಿನಲ್ಲಿ ಮೆರೆಯುತ್ತಾ…ದಿನ ದಿನವೂ ಹೊಸತನಕ್ಕೆ ಒಡ್ಡಿ ಕೊಳ್ಳುವ ನನ್ನ ಜೀವನ ವಿಕಸನ ಕ್ರಮಕ್ಕೊಂದು ಹೊಸ ಆಯಾಮವನ್ನು ಕೊಟ್ಟು, ಯಾಂತ್ರಿಕ ಜೀವನಕ್ಕೊಂದು ಬ್ರೇಕ್ ಕೊಟ್ಟ ಈ ಕರೋನದಿಂದ ನಾ ಕಲಿತದ್ದು ಕವಡೆಯಷ್ಟು ಮಾತ್ರ…ಈ ಸಮಯವನ್ನು ನಾನು ದಿನದ ಅರ್ದ ಗಂಟೆ ನಾನು ನಾನಾಗಿರುವುದಕ್ಕಾಗಿ ಬಳಸಿ ಕೊಂಡ “Quality Time” ನ ವಿಸ್ತರಣೆ ಎಂದರೂ ಅತಿಶಯೋಕ್ತಿ ಯಾಗಲಾರದು.
ಸ್ಟಂತ ಅವಜ್ಞೆ ಯಿಂದಲೋ….ಇತರರ ಆಘಾತ ಗಳಿಂದಲೋ….ಕಳೆಗುಂದಿದ ನನ್ನ ಬದುಕಿಗೊಂದು ಈ ಕಾಲ ಹೊಸ ಚಾಲನೆ ಯನ್ನು ಕೊಟ್ಟು ಸಮಷ್ಟಿಯ ಕದವ ತಟ್ಟಿ….ಬಾಗಿಲ ತೆರೆದ ಹೊಸ ತನದ ಅನುಭವದ ಘಮ ನನ್ನ ಬದುಕಿನುದ್ದಕ್ಕೂ ಹಿಂಬಾಲಿಸುವಂತೆ ಮಾಡಿದ್ದಂತೂ ದಿಟವೇ ಸರಿ…
ಮಾಧ್ಯಮಗಳ ವಾರ್ತಾ ವೈಖರಿ… ಹರಿತವಾದ ತರ್ಕಭಾಷೆ…ಸರಕಾರದ ಹೊಸ ಒಡಂಬಡಿಕೆ… ಭೂಷಣ ಪ್ರಾಯವಲ್ಲದ ಪ್ರದೂಷಿತ ಹೇಳಿಕೆ…ಕರೋನ ಮಹಾಮಾರಿಯ ಪರಮಾರ್ಜನೆಗೆ ಹೋರಾಡುವುದ ಬಿಟ್ಟು ಕತ್ತಿ ಮಸೆಯುವ ಚಾಪಲ್ಯ ತೋರುವ ಸಾಮಾಜಿಕ ಪರಿಸ್ಥಿತಿಯ ನಡುವೆ ನನ್ನ ಮನಸ್ಥಿತಿ ಕಂಡು ಕೊಂಡಿದ್ದು ಇಷ್ಟೇ….
ಪರರನ್ನು ನೋಯಿಸುವುದು
ಅಲ್ಲ ಗೆಲುವು……
ಎಲ್ಲರನು ಗೆಲ್ಲುವುದೇ
ಮಹಾ ಗೆಲುವು….!!!.ಎಂಬುವುದಾಗಿ
ಪೃಕೃತಿ ಕೊಟ್ಟ ಈ ಸವಾಲನ್ನು ಮನುಷ್ಯ ಶಕ್ತಿ–ಯುಕ್ತಿ–ಬುದ್ದಿ ಸಾಮರ್ಥ್ಯ ತತ್ವಾದರ್ಶಗಳ ಸಾಧನೆಗೆ ವಿನಿಯೋಗಿಸುವುದು ಬಿಟ್ಟು ದೈತ್ಯ ಧೋರಣೆಯ ತೋರಿ ಭೂಮ್ಯಾಕಾಶವ ಅಳೆಯ ಹೊರಟವನಂತೆ ವರ್ತಿಸುವುದು ನಿಜಕ್ಕೂ ಕರೋನ ಸಂಧರ್ಭಕ್ಕೆ ಅಪಸವ್ಯವೇ ಸರಿ. ಕರೋನಾದ ಸಂಧಿಗ್ಧತೆ ಯನ್ನು ಕೆಲವರು ಬಳಸಿಕೊಂಡ ರೀತಿ….ಅವರುಗಳ ನೀತಿ…ಭೀತಿಯ ವಾತಾವರಣ ದಲ್ಲಿಯೂ ನನಗೊಂದು ರೀತಿಯ ಹೊಸ ನೀತಿ ಪಾಠ ದೊರೆ ತದ್ದಂತೂ ಸುಳ್ಳಲ್ಲ.ಅಧಿಕಾರ ಲಾಲಸೆ…ದುಡ್ಡಿನ ಮದ… ವಿಲಾಸೀ ಜೀವನ…ಮುಖ ನೋಡಿ ಮಾತು … ಧೀರ್ಘ ದ್ವೇಷ…ಕಪಟ…ಮೋಸ … ಇದೆಲ್ಲಾ ಮಾನವನ ಅಮಾನುಷತೆಗೆ ಪ್ರಕೃತಿ ಕೊಟ್ಟ ಉತ್ತರ ಎಂದು ನಾನು ಪರಿಭಾವಿಸಿರುವುದರಿಂದಲೇ ಕರೋನಾದ ಸಮಯ ನನಗೆ ಜಟಿಲವಾಗಿ ಕಾಡದೆ ಆತ್ಮವಿಮರ್ಶೆಯ ಕವಲುದಾರಿ ಯಂತೆ ಕಂಡಿತು.
ನಾನು ಈ ಸಮಯದಲ್ಲಿ ನನಸಾಗದ ಕನಸನ್ನು ಕಾಣದೆ…. ಈಡೇರದ ಆಸೆಗಳಿಗೆ ಒಡಂಬಡದೆ..ನಂದನವನದಲ್ಲಿ ಕುಳಿತು ರಾಮರಾಜ್ಯದ ಪರಿಕಲ್ಪನೆ ಮಾಡದೆ ಈ ಮಳೆಗಾಲದ ಖರ್ಚಿ ಗಾಗುವಷ್ಟು ಹಪ್ಪಳ ಸಂಡಿಗೆ ಉಪ್ಪಿನಕಾಯಿ ಮಾಡುತ್ತಾ ನಾನು ಆರಾಧಿಸುವ ಯಕ್ಷಕಲೆ ಯಲ್ಲಿ ಸಮಯವನ್ನು ವಿನಿಯೋಗಿಸುತ್ತ ಸ್ನೇಹದ ಬಾಗಿಲನ್ನು ತೆರೆದಿಟ್ಟು ತಟಸ್ಥ ವಾಗಿ ಬೆಳವಣಿಗೆಯನ್ನು ನಿರೀಕ್ಷಿಸುತಲಿದ್ದೆ. ಈ ಪರಿರ್ತನೀಯ ಜಗತ್ತಿನಲ್ಲಿ ಬದಲಾಗ ಬೇಕಾಗಿರುವುದು ನಾನೇ ಹೊರತು ಜಗತ್ತಲ್ಲ ಎಂಬ ಸತ್ಯದರ್ಶನ ದೊಂದಿಗೆ ಜನಪದೀಯ ನಿಯಮ ಸಡಿಲಗೊಳ್ಳ ಬಹುದು ಆದರೆ ಆ ನಿಯಾಮಕನ ನಿಯಮ ಸಡಿಲಿಕೆಗೊಂಡೀತೇ ಎಂಬದೇ ನನ್ನ ಜಿಜ್ಞಾಸೆ…!!!
ಮಾಲತಿ.ಜಿ.ಪೈ ಕಾರ್ಕಳ