ಕೊರೋನಾ ಮುಕ್ತ ಮೊದಲ ರಾಷ್ಟ್ರ – ನ್ಯೂಜಿಲೆಂಡ್
ವೆಲ್ಲಿಂಗ್ಟನ್, ಮೇ 30: ಕೊರೋನಾ ವೈರಸ್ ಸೋಂಕು ಹಲವಾರು ದೇಶಗಳಲ್ಲಿ ನಿಯಂತ್ರಣಕ್ಕೆ ಸಿಗುತ್ತಿಲ್ಲ. ಲಾಕ್ ಡೌನ್, ಸಾಮಾಜಿಕ ಅಂತರ, ಕಟ್ಟುನಿಟ್ಟಿನ ಆದೇಶ ಸೇರಿದಂತೆ ಹಲವಾರು ಮುಂಜಾಗ್ರತಾ ಕ್ರಮಗಳ ಹೊರತಾಗಿಯೂ ಕೊರೊನಾ ಪ್ರಕರಣಗಳ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿದೆ. ಆದರೆ ಇಲ್ಲೊಂದು ರಾಷ್ಟ್ರ ಕೊರೊನಾ ವೈರಸ್ ಸೋಂಕಿನ ಎದುರು ಜಯ ಸಾಧಿಸಿ, ಕೊರೋನಾ ಗೆದ್ದ ಮೊದಲ ದೇಶ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಆ ದೇಶವೇ ನ್ಯೂಜಿಲೆಂಡ್.
ಕೊರೊನಾ ವೈರಸ್ ಸೋಂಕಿನಿಂದ ಸಂಪೂರ್ಣವಾಗಿ ಮುಕ್ತವಾಗಿರುವ ನ್ಯೂಜಿಲೆಂಡ್ ಪ್ರತಿಯೊಬ್ಬರ ಕಡ್ಡಾಯ ಕೊರೊನಾ ಪರೀಕ್ಷೆ ಸೇರಿದಂತೆ ಹಲವಾರು ಕಠಿಣ ಕ್ರಮಗಳನ್ನು ಕೊರೊನಾ ಸೋಂಕಿನ ವಿರುದ್ಧ
ಕೈಗೊಂಡಿತು. ಈ ಮೂಲಕ ಕೊರೊನಾ ವೈರಸ್ ಸೋಂಕನ್ನು ಸಂಪೂರ್ಣವಾಗಿ ತಡೆಗಟ್ಟಲು ಯಶಸ್ವಿಯಾದ ನ್ಯೂಜಿಲೆಂಡ್ ಕೊರೊನಾ ಮುಕ್ತ ಮೊದಲ ದೇಶ ಎನಿಸಿಕೊಂಡಿದೆ.
ನ್ಯೂಜಿಲೆಂಡ್ ನಲ್ಲಿ ಕಳೆದ ವಾರದಲ್ಲಿದ್ದ ಕೊರೊನಾ ಪ್ರಕರಣಗಳ ಸಂಖ್ಯೆ ಕೇವಲ ಒಂದು ಮತ್ತು ಯಾವುದೇ ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿಲ್ಲ.
ಐಸ್ ಲ್ಯಾಂಡ್ ದೇಶದಲ್ಲಿ ಕೂಡ ಕೊರೊನಾ ಪ್ರಕರಣಗಳ ಸಂಖ್ಯೆ ಶೂನ್ಯ ಮುಟ್ಟಿದ್ದರೂ ನಂತರ ಮೇ 28 ರಂದು ಒಂದು ಹೊಸ ಪ್ರಕರಣ ಮತ್ತು ಮೇ 29 ರಂದು ಎರಡು ಪ್ರಕರಣಗಳು ಪತ್ತೆಯಾಗಿ ಇಲ್ಲಿಯವರೆಗೆ ಒಟ್ಟು 3 ಕೊರೋನಾ ವೈರಸ್ ಪ್ರಕರಣಗಳು ಸಕ್ರಿಯವಾಗಿವೆ.
ಈ ಎರಡೂ ದೇಶಗಳು ಪ್ರತಿ ಕೇಂದ್ರಗಳಲ್ಲಿ ಗರಿಷ್ಠ ಜನರನ್ನು ತಪಾಸಣೆಗೆ ಒಳಪಡಿಸಿ, ಪ್ರತಿಯೊಬ್ಬರ ಕೊರೊನಾ ಪರೀಕ್ಷೆ ಕಡ್ಡಾಯಗೊಳಿಸಿತು. ಕೊರೋನಾ ಸೋಂಕು ದೃಢಪಟ್ಟವರನ್ನು ಐಸೋಲೇಶನ್ ಹಾಗೂ ಕ್ವಾರಂಟೈನ್ ಗೆ ಒಳಪಡಿಸಿ ಚಿಕಿತ್ಸೆ ನೀಡಲಾಯಿತು. ದೇಶದಲ್ಲಿ ಜಾರಿಯಲ್ಲಿದ್ದ ಕಟ್ಟುನಿಟ್ಟಿನ ಕ್ರಮಗಳು ಕೊರೊನಾ ನಿಯಂತ್ರಿಸುವಲ್ಲಿ ಸಹಕಾರಿಯಾಯಿತು.








