ಕೊರೊನಾ ಹೆಚ್ಚಳ : ಕೇರಳ ಗಡಿ ಭಾಗದಲ್ಲಿ ಹೈ ಅಲರ್ಟ್
ದಕ್ಷಿಣ ಕನ್ನಡ : ನೆರೆಯ ಕೇರಳ ರಾಜ್ಯದಲ್ಲಿ ಕೊರೊನಾ ವೈರಸ್ ಯಾರೂ ಊಹಿಸದ ರೀತಿಯಲ್ಲಿ ಅಬ್ಬರಿಸಲು ಆರಂಭಿಸಿದೆ.
ದೇಶದಲ್ಲಿ ಪತ್ತೆಯಾಗುತ್ತಿರುವ ಕೊರೊನಾ ಸೋಂಕು ಪ್ರಕರಣಗಳ ಪೈಕಿ ಕೇರಳದಲ್ಲಿಯೇ ಅರ್ಧಕ್ಕಿಂತ ಹೆಚ್ಚು ಕೇಸ್ ಗಳು ಪತ್ತೆಯಾಗುತ್ತಿವೆ.
ಕೇರಳದಲ್ಲಿ ಇಂದು ಕೂಡ ಕೊರೊನಾ ಸ್ಫೋಟಗೊಂಡಿದ್ದು, 20 ಸಾವಿರಕ್ಕೂ ಹೆಚ್ಚು ಕೇಸ್ ಗಳು ಪತ್ತೆಯಾಗಿವೆ. ಇದು ನಮ್ಮ ಕರಾವಳಿ ಭಾಗದ ಜನರಲ್ಲಿ ಆತಂಕ ಹೆಚ್ಚಿಸಿದೆ.
ಕೇರಳದಲ್ಲಿ ದಿನೇ ದಿನೆ ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ಸೋಂಕು ರಾಜ್ಯದಲ್ಲೂ ಆತಂಕ ಉಂಟು ಮಾಡಿದೆ.
ಪರಿಣಾಮ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಕೊರೊನಾ ಸೋಂಕಿನ ಪ್ರಮಾಣ ಗಣನೀಯವಾಗಿ ಹೆಚ್ಚುತ್ತಿದೆ.
ಜಿಲ್ಲೆಯಲ್ಲಿ ಕಳೆದ 3 ದಿನದಿಂದ 345 ಕೊರೊನಾ ಸೋಂಕಿನ ಪ್ರಕರಣಗಳು ದಾಖಲಾಗಿದ್ದು ಜಿಲ್ಲೆಯಲ್ಲಿ ಭೀತಿಯನ್ನುಂಟು ಮಾಡಿದೆ.
ಈ ಹಿನ್ನೆಲೆಯಲ್ಲಿ ಕೇರಳ ಗಡಿಯಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ರಾಜ್ಯ ಸರಕಾರ ಆದೇಶ ನೀಡಿದೆ. ಕೊರೊನಾ ನಿಯಂತ್ರಣಕ್ಕಾಗಿ ಜಿಲ್ಲಾಡಳಿತ, ಕೇರಳ ಗಡಿಭಾಗದ ತಲಪಾಡಿ ಚೆಕ್ ಪೋಸ್ಟ್ ನಲ್ಲಿ ಕಟ್ಟು ನಿಟ್ಟಿನ ತಪಾಸಣೆಗೆ ಕ್ರಮ ಕೈಗೊಂಡಿದೆ.
ಇನ್ನು ಕೇರಳದ ಕಾಸರಗೋಡು ಜಿಲ್ಲೆ ಸಂಪರ್ಕಿಸುವ ಜಿಲ್ಲೆಯ ಪ್ರಮುಖ ರಸ್ತೆ ಸೇರಿದಂತೆ ಒಳ ರಸ್ತೆಗಳಲ್ಲೂ ಚೆಕ್ ಪೋಸ್ಟ್ ನಿರ್ಮಾಣ ಮಾಡಲಾಗಿದೆ.