ಮುಂಬೈ, ಮೇ 22 : ಕೊರೋನಾ ಮಹಾಮಾರಿ ಬಡವ ಬಲ್ಲಿದ ಎಂಬ ಭೇದ ಇಲ್ಲದೇ ಪ್ರತಿಯೊಬ್ಬರಲ್ಲೂ ಭೀತಿ ಹುಟ್ಟಿಸಿದೆ. ಜಗತ್ತಿನಾದ್ಯಂತ ಸಿನಿಮಾ ತಾರೆಯರು, ಕ್ರೀಡಾ ಪಟುಗಳು ಸೇರಿದಂತೆ ಎಲ್ಲಾ ಸೆಲೆಬ್ರಿಟಿಗಳು ಕೊರೊನಾ ಭೀತಿಯಿಂದ ಮನೆಯಲ್ಲೇ ಇದ್ದಾರೆ.
ಇತ್ತೀಚೆಗೆ ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್ ಮನೆಯಲ್ಲಿ ಕೆಲಸ ಮಾಡುವ 23 ವರ್ಷದ ಯುವಕನಿಗೆ ಕೊರೊನಾ ಸೋಂಕು ತಗುಲಿರುವ ವರದಿ ಬಂದಿತ್ತು. ಈಗ ಅದರ ಬೆನ್ನಲ್ಲೇ ಅವರ ಮನೆಯಲ್ಲಿ ಕೆಲಸ ಮಾಡುವ ಇನ್ನಿಬ್ಬರಲ್ಲೂ ಕೊರೊನಾ ಸೋಂಕು ಪತ್ತೆಯಾಗಿದೆ ಎಂಬ ಸುದ್ದಿ ಕೇಳಿ ಬರುತ್ತಿದೆ.
ಈ ಮೊದಲು ಮುಂಬೈನ ಅಂಧೇರಿಯಲ್ಲಿರುವ ಬೋನಿ ಕಪೂರ್ ಮನೆಯಲ್ಲಿ ಮನೆ ಕೆಲಸ ಮಾಡುತ್ತಿದ್ದ ವ್ಯಕ್ತಿಯಲ್ಲಿ ಕೊರೊನಾ ವೈರಸ್ ದೃಢಪಟ್ಟಾಗ ಸ್ವತಃ ಬೋನಿ ಕಪೂರ್ ಅವರೇ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹಲವು ವರ್ಷಗಳಿಂದ ನಮ್ಮ ಮನೆಯಲ್ಲಿ ಕೆಲಸ ಮಾಡುವ ವ್ಯಕ್ತಿಯಲ್ಲಿ ಕೊರೊನಾ ದೃಢಪಟ್ಟಿದೆ ಎಂದು ಮಾಹಿತಿ ಹಂಚಿಕೊಂಡಿದ್ದರು ಮತ್ತು ತಂದೆಯ ಸಂದೇಶವನ್ನು ನಟಿ ಜಾನ್ವಿ ಕಪೂರ್ ಅವರು ಇನ್ ಸ್ಟಾಗ್ರಾಮ್ ನಲ್ಲಿ ಷೇರ್ ಮಾಡಿದ್ದರು.
ಬೋನಿ ಕಪೂರ್, ನಾವೆಲ್ಲರೂ ಕ್ಷೇಮವಾಗಿದ್ದೇವೆ, ನಾನು ಮತ್ತು ನನ್ನ ಮಕ್ಕಳು ಕೊರೊನಾ ಸೋಂಕು ನ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿದ್ದೇವೆ. ನಮ್ಮಲ್ಲಿ ಯಾರಿಗೂ ಯಾವುದೇ ಕೊರೊನಾ ಸೋಂಕಿನ ಲಕ್ಷಣಗಳು ಇಲ್ಲ. ಕೊರೋನಾ ಸೋಂಕಿಗೆ ಸಂಬಂಧಿಸಿ ಅಧಿಕಾರಿಗಳು ನಮಗೆ ಸಂಪೂರ್ಣ ಸಹಕಾರ ನೀಡಿದ್ದಾರೆ. ಅವರ ಸಲಹೆ ಸೂಚನೆಗಳಂತೆ ನಾವು ನಡೆದುಕೊಳ್ಳುತ್ತಿದ್ದೇವೆ ಎಂದು ಹೇಳಿಕೆ ನೀಡಿದ್ದರು.
ಲಾಕ್‌ಡೌನ್ ಆದೇಶ ಜಾರಿ ಆದಾಗಿನಿಂದ ನಾವು ಮನೆ ಬಿಟ್ಟು ಹೊರಗೆ ಹೋಗಿಲ್ಲ. ಮಹಾರಾಷ್ಟ್ರ ಸರ್ಕಾರ ಮತ್ತು ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳು ಕೂಡಲೇ ಕಾರ್ಯ ಪ್ರವೃತರಾಗಿದ್ದು, ನಮ್ಮ ಮನೆ ಕೆಲಸದವನು ಕೂಡ ಬೇಗ ಗುಣಮುಖ ಆಗುತ್ತಾನೆ ಎಂಬ ಭರವಸೆ ಇದೆ’ ಎಂದು ಕಪೂರ್ ಕುಟುಂಬ ಹೇಳಿಕೊಂಡಿತ್ತು.
ಆದರೆ ಇದೀಗ ಅದರ ಬೆನ್ನಲ್ಲೆ ಇನ್ನಿಬ್ಬರು ಕೆಲಸದವರಿಗೆ ವೈರಸ್ ತಗುಲಿರುವುದು ಎಂದು ಸುದ್ದಿ ಬಂದಿದೆ. ಬಾಲಿವುಡ್ ನಟಿ ಶ್ರೀ ದೇವಿ ಅವರ ಎರಡನೇ ಮಗಳು ಖುಷಿ ಕಪೂರ್ ಅಮೆರಿಕದಲ್ಲಿ ವಿದ್ಯಾಭಾಸ ಮಾಡುತ್ತಿದ್ದು, ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಲಾಕ್ ಡೌನ್ ಆದೇಶ ಜಾರಿ ಆಗುವುದಕ್ಕೂ ಮುನ್ನವೇ ಭಾರತಕ್ಕೆ ಮರಳಿದರು.








