ಕಣ್ಣಿನಿಂದ ಕೊರೊನಾ ಸೋಂಕು ಪತ್ತೆಹಚ್ಚಲು ಸಾಧ್ಯವಂತೆ !
ಕೆನಡಾ, ಜೂನ್ 21: ವಿಶ್ವದಾದ್ಯಂತ ವ್ಯಾಪಕವಾಗಿ ಕೊರೊನಾ ಸೋಂಕು ಹರಡುತ್ತಿದ್ದು, ಕೊರೊನಾ ವೈರಸ್ ಅನ್ನು ನಿಯಂತ್ರಿಸಲಾಗದೆ ದೇಶಗಳು ಕಂಗಾಲಾಗಿದೆ. ಈ ಮಧ್ಯೆ ಕೊರೊನಾ ಸೋಂಕು ತಗುಲಿದ ವ್ಯಕ್ತಿಗಳಲ್ಲಿ ಯಾವುದೇ ಕೊರೊನಾ ಸೋಂಕಿನ ಲಕ್ಷಣಗಳು ಕಾಣಿಸಿಕೊಳ್ಳದ ವರದಿಗಳು ದಾಖಲಾಗಿದೆ. ಭಾರತದಲ್ಲಿ ಶೇಕಡಾ 68 ಕೊರೊನಾ ಸೋಂಕಿತ ಪ್ರಕರಣಗಳಲ್ಲಿ ಯಾವುದೇ ಕೊರೊನಾ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿಲ್ಲ ಎಂದು ಹೇಳಲಾಗಿದೆ. ಇದೀಗ ಹೊಸ ಅಧ್ಯಯನವೊಂದು ಕೇವಲ ಕಣ್ಣಿನ ಆಧಾರದ ಮೇಲೆ ಒಬ್ಬ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿದೆಯೇ ಇಲ್ಲವೇ ಎಂಬುದನ್ನು ತಿಳಿಯಬಹುದಾಗಿದೆ ಎಂದು ಹೇಳಿದೆ.
ಕೆನಡಾದಲ್ಲಿರುವ ರಾಯಲ್ ಅಲೆಕ್ಸಾಂಡರ್ ಆಸ್ಪತ್ರೆಯ ಕಣ್ಣಿನ ಚಿಕಿತ್ಸಾ ವಿಭಾಗಕ್ಕೆ ಪದೇ ಪದೇ ಕಣ್ಣು ಕೆಂಪು ಬಣ್ಣಕ್ಕೆ ತಿರುಗುತ್ತಿದ್ದ ಮಹಿಳೆಯೊಬ್ಬಳು ಚಿಕಿತ್ಸೆಗಾಗಿ ಬಂದಿದ್ದಳು. ಆಸ್ಪತ್ರೆಯಲ್ಲಿ ಆಕೆಯನ್ನು ದಾಖಲಿಸಿ ಕಣ್ಣಿನ ಚಿಕಿತ್ಸೆ ನೀಡಿದರೂ ವೈದ್ಯರಿಗೆ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಾಗಿಲ್ಲ. ಆಕೆ ಏಷ್ಯಾ ಭಾಗದಿಂದ ಕೆನಡಾಗೆ ಬಂದಿದ್ದಳು ಎಂಬ ಮಾಹಿತಿ ಅರಿತ ಕೂಡಲೇ ವೈದ್ಯಕೀಯ ಸಿಬ್ಬಂದಿಗಳು ಆಕೆಯನ್ನು ಕೊರೊನಾ ಸೋಂಕು ಪರೀಕ್ಷೆಗೆ ಒಳಪಡಿಸಿದರು. ಪರೀಕ್ಷಾ ವರದಿಯಲ್ಲಿ ಆಕೆಗೆ ಕೊರೊನಾ ಸೋಂಕು ತಗುಲಿರುವುದು ಪತ್ತೆಯಾಗಿದೆ. ನಂತರ ಆಕೆಯ ಸಂಪರ್ಕದಲ್ಲಿ ಇದ್ದವರನ್ನು ಪತ್ತೆ ಹಚ್ಚಿ ಕ್ವಾರಂಟೈನ್ ಮಾಡಲಾಯಿತು.
ಕೆನಡಾದಲ್ಲಿನ ವೈದ್ಯರ ಪ್ರಕಾರ ಕೊರೊನಾ ಪ್ರಕರಣಗಳಲ್ಲಿ ಶೇಕಡಾ 10- 15ರಷ್ಟು ಪ್ರಕರಣಗಳನ್ನು ಅವರು ಕಣ್ಣಿನ ಆಧಾರದ ಮೇಲೆಯೇ ಕಂಡು ಹಿಡಿದಿದ್ದಾರೆ. ಕೊರೊನಾ ಸೋಂಕು ತಗುಲಿದರೆ ಕೆಲವು ಪ್ರಕರಣಗಳಲ್ಲಿ ಕಣ್ಣು ಕೆಂಪು ಬಣ್ಣಕ್ಕೆ ತಿರುಗುತ್ತದೆ. ಹಾಗಾಗಿ ಕಣ್ಣು ಕೆಂಪಾಗುವುದು ಕೂಡ ಕೊರೊನಾ ಸೋಂಕಿನ ಲಕ್ಷಣಗಳಲ್ಲಿ ಒಂದು. ಕೆಲವರಿಗೆ ಕೊರೊನಾ ಲಕ್ಷಣಗಳಾದ ಜ್ವರ, ಕೆಮ್ಮು, ಶೀತ ಮತ್ತು ಗಂಟಲು ನೋವು ಇಲ್ಲದಿದ್ದರೂ ಕಣ್ಣು ಕೆಂಪಾಗುತ್ತದೆ. ಹಾಗಾಗಿ ಕಣ್ಣಿನ ಮೂಲಕವೂ ಸೋಂಕನ್ನು ಪತ್ತೆ ಹಚ್ಚಬಹುದು ಎಂಬುವುದು ಕೆನಡಾ ವೈದ್ಯರ ಅಭಿಪ್ರಾಯ.