ಯೆರೇವನ್, ಜೂನ್ 2 : ಅರ್ಮೇನಿಯಾದ ಪ್ರಧಾನಿ ನಿಕೋಲ್ ಪಶಿನಿಯನ್ ಅವರಲ್ಲಿ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದೆ. ಅಷ್ಟೇ ಅಲ್ಲ ಅವರ ಇಡೀ ಕುಟುಂಬಕ್ಕೆ ಕೊರೋನಾವೈರಸ್ ಸೋಂಕು ತಗುಲಿರುವುದು ದೃಢವಾಗಿದೆ.
ಅರ್ಮೇನಿಯಾದ ಪ್ರಧಾನಿಯವರಿಗೆ ಕೊರೊನಾ ಸೋಂಕಿನ ಯಾವುದೇ ಲಕ್ಷಣಗಳು ಕಾಣಿಸಿಕೊಂಡಿರಲ್ಲಿಲ್ಲ. ಆದರೆ ಅವರು ಮಿಲಿಟರಿ ತಾಣಗಳಿಗೆ ಭೇಟಿ ನೀಡುವ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕೊರೊನಾ ಪರೀಕ್ಷೆಗೆ ಒಳಗಾಗಲು ನಿರ್ಧರಿಸಿದರು. ಕೊರೋನಾ ಸೋಂಕಿನ ಪರೀಕ್ಷೆಯಲ್ಲಿ ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ಕೆಲವು ದಿನಗಳ ಹಿಂದೆ ಅವರು ಸಭೆಯೊಂದರಲ್ಲಿ ಕೈಗವಸುಗಳನ್ನು ಧರಿಸದೆ ನೀರಿನ ಗ್ಲಾಸ್ ತಂದಿದ್ದ ಯುವಕನಿಂದ ಗ್ಲಾಸ್ ನೀರನ್ನು ಪಡೆದು ಕುಡಿದಿದ್ದು, ಆ ಯುವಕನಿಂದಾಗಿ ಅರ್ಮೇನಿಯಾದ ಪ್ರಧಾನಿಯವರಿಗೆ ಕೊರೊನಾ ಸೋಂಕು ತಗುಲಿರಬಹುದು ಎಂದು ಅಂದಾಜಿಸಲಾಗಿದೆ. ಯಾವುದೇ ಸೋಂಕು ಲಕ್ಷಣಗಳಿಲ್ಲದ ಹಿನ್ನಲೆಯಲ್ಲಿ ಅರ್ಮೇನಿಯಾದ ಪ್ರಧಾನಿ ನಿಕೋಲ್ ಪಶಿನಿಯನ್ ಅವರು ಹೋಂ ಕ್ವಾರೆಂಟೈನ್ ಗೆ ಒಳಗಾಗಿದ್ದು, ನಾನು ಮನೆಯಿಂದಲೇ ಕೆಲಸ ಮಾಡುವುದಾಗಿ ಪ್ರಧಾನಿ ಹೇಳಿದ್ದಾರೆ.
ಇಲ್ಲಿಯವರೆಗೆ ಅರ್ಮೇನಿಯಾದಲ್ಲಿ 9,000 ಕ್ಕೂ ಹೆಚ್ಚು ಕೊರೋನಾ ಪ್ರಕರಣಗಳು ವರದಿಯಾಗಿದ್ದು ಸುಮಾರು 130 ಮಂದಿ ಸಾವಿಗೀಡಾಗಿದ್ದಾರೆ. ಅರ್ಮೇನಿಯಾದಲ್ಲಿ ಮಾರ್ಚ್ ಮಧ್ಯದಿಂದಲೇ ಲಾಕ್ ಡೌನ್ ಜಾರಿಯಲ್ಲಿದೆ.








