ಬೆಂಗಳೂರು : ರಂಗಿತರಂಗ ಖ್ಯಾತಿಯ ಅನುಪ್ ಭಂಡಾರಿ ನಿರ್ದೇಶನದ, ಸ್ಯಾಂಡಲ್ ವುಡ್ ಬಾದ್ ಷಾ ಅಭಿನಯದ ಪ್ಯಾಂಟಮ್, ಟೈಟಲ್ ನಿಂದಲೇ ಗಾಂಧಿನಗರದಲ್ಲಿ ಭಾರಿ ಸದ್ದು ಮಾಡುತ್ತಿದೆ. ಪ್ಯಾಂಟಮ್ ಸಿನಿಮಾ ಚಿತ್ರೀಕರಣ ಕೊರೊನಾ ಕಾರಣದಿಂದಾಗಿ ಮುಂದೂಡಲಾಗಿತ್ತು. ಆದರೆ ರಾಜ್ಯ ಸರ್ಕಾರ ಅನುಮತಿ ನೀಡಿದ ಬಳಿ ಚಿತ್ರೀಕರಣ ಪ್ರಾರಂಭ ಮಾಡುವುದಾಗಿ ಚಿತ್ರತಂಡ ಹೇಳಿತ್ತು. ಅದಕ್ಕೆ ಸೂಕ್ತ ತಯಾರಿಯನ್ನು ಮಾಡಿಕೊಂಡಿದ್ದ ಸಿನಿಮಾಗೆ ಇದೀಗ ಮತ್ತೆ ಕೊರೊನಾಸುರ ಕಂಟಕವಾಗಿದ್ದಾನೆ.
ಹೌದು..! ಜುಲೈ 1 ರಿಂದ ಪ್ಯಾಂಟಮ್ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗುತ್ತದೆ ಎಂದು ಚಿತ್ರತಂಡ ಹೇಳಿತ್ತು. ಅದಕ್ಕಾಗಿ ಹೈದರಾಬಾದ್‌ನ ಅನ್ನಪೂರ್ಣ ಸ್ಟುಡಿಯೋದಲ್ಲಿ 6 ಕೋಟಿ ರೂಪಾಯಿ ಖರ್ಚು ಮಾಡಿ ಅರಣ್ಯದ ಸೆಟ್ ಅನ್ನು ಚಿತ್ರತಂಡ ಹಾಕಿತ್ತು.ರಾಜಮಂಡ್ರಿ ಮತ್ತು ಮುಂತಾದ ಕಡೆಗಳಿಂದ ವಿವಿಧ ಬಗೆಯ ಗಿಡಗಳು, ಮರಗಳನ್ನು ತರಲಾಗಿತ್ತು, ಕೆಲವನ್ನು ಕಲಾ ತಂಡ ಸೃಷ್ಟಿ ಮಾಡಿತ್ತು. ಆದರೆ ಈಗ ಚಿತ್ರೀಕರಣ ಮುಂದೂಡಲಾಗಿದೆ. ಇದರಿಂದ ಸಿನಿಮಾದ ನಿರ್ಮಾಪಕರಿಗೆ ನಷ್ಟವಾಗಿದೆ ಎಂದು ಹೇಳಲಾಗುತ್ತಿದೆ.








