ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಅಬ್ಬರ ಮುಂದುವರೆದಿದ್ದು, ಇಂದು 139 ಮಂದಿಗೆ ಪಾಸಿಟಿವ್ ಬಂದಿದೆ. ಇಂದು ಕೂಡಾ 6 ಮಂದಿ ಕೊರೊನಾ ಮಹಾಮಾರಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ಕೊರೊನಾಗೆ ಜಿಲ್ಲೆಯಲ್ಲಿ ಬಲಿಯಾದವರ ಸಂಖ್ಯೆ 159ಕ್ಕೆ ಏರಿಕೆಯಾಗಿದೆ.
ಮಂಗಳೂರು ತಾಲೂಕಿನ 91 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದ್ದರೆ, ಬಂಟ್ವಾಳ 19, ಬೆಳ್ತಂಗಡಿ 14, ಸುಳ್ಳ ತಾಲೂಕಿನ 9 ಮಂದಿಗೆ ಕೊರೊನಾ ವಕ್ಕರಿಸಿದೆ. ಇತರೆ ಜಿಲ್ಲೆಯಿಂದ ಬಂದ 6 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದ್ದು. ಜಿಲ್ಲೆಯಲ್ಲಿ ಈವರೆಗೆ ಒಟ್ಟು 5,852 ಮಂದಿಗೆ ಕೊರೊನಾ ಪಾಸಿಟಿವ್ ದಾಖಲಾಗಿದೆ.
ಇದೇ ವೇಳೆ ಮಾಜಿ ಎಂಎಲ್‍ಸಿ ಐವಾನ್ ಡಿಸೋಜಾ ಹಾಗೂ ಅವರ ಪತ್ನಿಗೆ ಕೊರೊನಾ ಡೃಢಪಟ್ಟಿದೆ. ಐವಾನ್ ಡಿಸೋಜಾ ಪತ್ನಿ ಖಾಸಗಿ ಆಸ್ಪತ್ರೆಯ ವೈದ್ಯೆಯಾಗಿ ಕೆಲಸ ಮಾಡುತ್ತಿದ್ದಾರೆ.
ನಿನ್ನೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಂಗಳೂರಿನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಐವಾನ್ ಡಿಸೋಜಾ ಜೊತೆಗಿದ್ದರು. ಐವಾನ್ ಡಿಸೋಜಾ ಜೊತೆಗಿದ್ದ ಕಾಂಗ್ರೆಸ್ ನಾಯಕರಿಗೆ ಕ್ವಾರೆಂಟೈನ್ ಟೆನ್ಷನ್ ಶುರುವಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಮಾಜಿ ಸಚಿವ ಯು.ಟಿ.ಖಾದರ್, ರಮಾನಾಥ್ ರೈ ಸೇರಿದಂತೆ ಹಲವು ಮುಖಂಡರಿಗೆ ಕೊರೊನಾ ಆತಂಕ ಕಾಡಲಾರಂಭಿಸಿದೆ.