ಕೊರೊನಾವನ್ನು ಚಿಕಿತ್ಸೆಯಿಂದ ಗೆಲ್ಲಬೇಕೇ ಹೊರತು ಸುಳ್ಳುಗಳಿಂದಲ್ಲ : ಸರ್ಕಾರಕ್ಕೆ ಸಿದ್ದರಾಮಯ್ಯ ಚಾಟಿ
ಬೆಂಗಳೂರು : ಕೊರೊನಾ ಸೋಂಕು ಏರಿಕೆ ವಿಚಾರವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಕೊರೊನಾವನ್ನು ಔಷಧಿ-ಚಿಕಿತ್ಸೆಯಿಂದ ಗೆಲ್ಲಬೇಕೇ ಹೊರತು ಸುಳ್ಳುಗಳಿಂದಲ್ಲ ಎಂದು ಸರ್ಕಾರಕ್ಕೆ ಸಿದ್ದರಾಮಯ್ಯ ಚಾಟಿ ಬೀಸಿದ್ದಾರೆ.
ಕೊರೊನಾ ವಿಚಾರವಾಗಿ ಮತ್ತು ಅಂಕಿಅಂಶಗಳ ಬಗ್ಗೆ ಸಿದ್ದರಾಮಯ್ಯ ಟ್ವಿಟ್ಟರ್ ನಲ್ಲಿ ಸರ್ಕಾರಕ್ಕೆ ಪ್ರಶ್ನೆಗಳ ಸುರಿಮಳೆ ಗೈದಿದ್ದಾರೆ.
ಸಿದ್ದರಾಮಯ್ಯ ಟ್ವಿಟ್ಟರ್ ನಲ್ಲಿ.. ” ರಾಜ್ಯದ ಆರೋಗ್ಯ ಇಲಾಖೆ ದಾಖಲೆ ಪ್ರಕಾರ 2020ರ ಡಿಸೆಂಬರ್ ವರೆಗಿನ ಕೊರೊನಾ ಸಾವಿನ ಸಂಖ್ಯೆ- 12,090. ರಾಜ್ಯ ಯೋಜನಾ ಮತ್ತು ಅಂಕಿಅಂಶ ಇಲಾಖೆಯ ಪ್ರಕಾರ ಇದೇ ಅವಧಿಯಲ್ಲಿ ಕೊರೊನಾ ಸಾವಿನ ಸಂಖ್ಯೆ- 22,320. ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಡಾ.ಕೆ.ಸುಧಾಕರ್ ಇದರಲ್ಲಿ ಯಾವುದು ಸತ್ಯ, ಯಾವುದು ಸುಳ್ಳು?
” ಕೊರೊನಾ ಉಲ್ಭಣಕ್ಕೆ ಬಿಜೆಪಿ ಸರ್ಕಾರದ ಅಸಾಮಥ್ರ್ಯ, ಭ್ರಷ್ಟಾಚಾರ ಹಾಗೂ ಸುಳ್ಳುಗಳು ಕಾರಣ ಎಂದು ಮೊದಲ ದಿನದಿಂದ ಹೇಳುತ್ತಾ ಬಂದಿದ್ದೇನೆ. ತಪ್ಪನ್ನು ತಿದ್ದಿಕೊಳ್ಳದೆ ಎಲ್ಲವನ್ನು ಸಮರ್ಥಿಸಿಕೊಂಡ ಸರ್ಕಾರದ ಲಜ್ಜೆಗೇಡಿತನದ ಫಲವನ್ನು ರಾಜ್ಯದ ಜನ ಅನುಭವಿಸಬೇಕಾಗಿದೆ”. “ಬಿಜೆಪಿ ಸುಳ್ಳು ಹೇಳಿರುವುದು ಕೊರೊನಾ ಸಾವಿನ ಬಗ್ಗೆ ಮಾತ್ರ ಅಲ್ಲ, ಔಷಧಿ,ಮಾಸ್ಕ್,ಸ್ಯಾನಿಟೈಸರ್ ಪಿಪಿ ಕಿಟ್ ಗಳಿಂದ ಹಿಡಿದು ಆಸ್ಪತ್ರೆಗಳ ಹಾಸಿಗೆ ಖರೀದಿ ವರೆಗೆ ಎಲ್ಲದರಲ್ಲಿಯೂ ನಡೆದಿರುವ ಭ್ರಷ್ಟಾಚಾರವನ್ನು ಮುಚ್ಚಿಕೊಳ್ಳಲು ಬಿ.ಎಸ್.ಯಡಿಯೂರಪ್ಪ ಮತ್ತು ಡಾ.ಕೆ.ಸುಧಾಕರ್ ಸುಳ್ಳು ಹೇಳುತ್ತಲೇ ಇದ್ದಾರೆ”.
“ಕೊರೊನಾ ಸೋಂಕು, ಸಾವು, ಚಿಕಿತ್ಸೆ ಮತ್ತು ನೊಂದ ಕುಟುಂಬಗಳಿಗೆ ನೀಡಿರುವ ಪರಿಹಾರದ ಬಗ್ಗೆ ರಾಜ್ಯದ ಬಿಜೆಪಿ ಸರ್ಕಾರ ತಕ್ಷಣ ಶ್ವೇತಪತ್ರ ಹೊರಡಿಸಿ ನಿಜಸಂಗತಿಯನ್ನು ರಾಜ್ಯದ ಜನತೆಗೆ ತಿಳಿಸಬೇಕು.ಕೊರೊನಾವನ್ನು ಔಷಧಿ-ಚಿಕಿತ್ಸೆಯಿಂದ ಗೆಲ್ಲಬೇಕೇ ಹೊರತು ಸುಳ್ಳುಗಳಿಂದಲ್ಲ”.
