ಚಾಮರಾಜನಗರ: ದೇಶದಲ್ಲಿ ಕರೊನಾ ಹಾಟ್ ಸ್ಪಾಟ್ ಆಗಿರುವ ರಾಜ್ಯ ತಮಿಳುನಾಡಿನ ಸೇಲಂಗೆ ಈರುಳ್ಳಿ ಮಾರಲು ಕಳೆದ ಏಳು ದಿನಗಳಲ್ಲಿ ಮೂರು ಬಾರಿ ತೆರಳಿದ್ದ ಗುಂಡ್ಲುಪೇಟೆಯ ವಾಹನ ಚಾಲಕನಿಗೆ ಕರೊನಾ ವೈರಸ್ ತಗುಲಿರುವುದು ಖಚಿತವಾಗಿದೆ.
ಗುಂಡ್ಲುಪೇಟೆ ಪಟ್ಟಣದ ಮಹದೇವಪ್ರಸಾದ್ ನಗರದ ವ್ಯಕ್ತಿ (39) ಜೂ. 16ರಂದು ತಮಿಳುನಾಡಿನ ಸೆಲಂಗೆ ಹೋಗಿ ಬಂದಿದ್ದ ಜೂ.18ರಂದು ಗಂಟಲು ನೋವು, ಶೀತ, ಕೆಮ್ಮು ಕಾಣಿಸಿಕೊಂಡಿದ್ದ ಹಿನ್ನೆಲೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ. ಈ ವೇಳೆ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ವರದಿ ಜೂ.19ರಂದು ಪಾಸಿಟೀವ್ ಬಂದಿದೆ ಎಂದು ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ತಿಳಿಸಿದ್ದಾರೆ.
ಸೀಲ್ ಡೌನ್: ಮಹದೇವಪ್ರಸಾದ್ ನಗರದ ವ್ಯಕ್ತಿಗೆ ಕರೊನಾ ಸೋಂಕು ತಗುಲಿರುವ ಹಿನ್ನೆಲೆ ಬಡಾವಣೆಯ ಬೀದಿಯನ್ನು ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ. ಸೋಂಕಿತ ವಾಸ ಮಾಡುತ್ತಿದ್ದ ಪ್ರದೇಶವನ್ನು ಕಂಟೇನ್ಮೆAಟ್ ಜೋನ್ ಎಂದು ಘೋಷಿಸಲಾಗಿದೆ. 100 ಕಿ.ಮೀ ವ್ಯಾಪ್ತಿಯನ್ನು ಬಫರ್ ಜೋನ್ ಮಾಡಲಾಗಿದೆ. ಸೋಂಕಿತ ಪ್ರಾಥಮಿಕ ಸಂಪರ್ಕದಲ್ಲಿದ್ದ 10 ಜನರನ್ನು(ಸೋಂಕಿತನ ಪತ್ನಿ, ತಾಯಿ, ಮೂವರು ಮಕ್ಕಳು, ತಮ್ಮ-ತಮ್ಮನ ಹೆಂಡತಿ, ಮೂವರು ಮಕ್ಕಳು) ಅವರ ಮನೆಗಳಲ್ಲೇ ಕ್ವಾರಂಟೈನ್ ಮಾಡಲಾಗಿದೆ.