ತುಮಕೂರು : ಕುಣಿಗಲ್ ನ ಕಾಂಗ್ರೆಸ್ ಶಾಸಕ ಡಾ. ರಂಗನಾಥ್ ಅವರಿಗೆ ಕೊರೊನಾ ಸೋಂಕಿರುವುದು ದೃಢವಾಗಿದ್ದು, ಕಾಂಗ್ರೆಸ್ ಪಾಳಯದಲ್ಲಿ ಆತಂಕ ಮನೆ ಮಾಡಿದೆ. ರಂಗನಾಥ್ ಅವರು ಕಳೆದ ವಾರ ಕುಣಿಗಲ್ ಪೊಲೀಸರೊಂದಿಗೆ ಸಭೆ ನಡೆಸಿದ್ದರು. ಈ ಸಭೆಯಲ್ಲಿ ಭಾಗಿಯಾಗಿದ್ದ ಪೇದೆಗೆ ಸೋಂಕು ಪತ್ತೆಯಾದ ಹಿನ್ನೆಲೆ ಶಾಸಕರನ್ನು ಹೋಂ ಕ್ವಾರಂಟೈನ್ ನಲ್ಲಿ ಇಡಲಾಗಿತ್ತು. ಭಾನುವಾರ ಬೆಂಗಳೂರಿನಲ್ಲೇ ಸ್ಯಾಂಪಲ್ ಕೊಟ್ಟಿದ್ದರು. ಇಂದು ಬೆಳಗ್ಗೆ ರಿಪೋರ್ಟ್ ಬಂದಿದ್ದು ಪಾಸಿಟಿವ್ ದೃಢಪಟ್ಟಿದೆ. ಹಾಗಾಗಿ ಬೆಂಗಳೂರು ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತಿದ್ದಾರೆ.
ಕಾಂಗ್ರೆಸ್ ಪಾಳಯದಲ್ಲಿ ಆತಂಕ
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರಿಗೆ ತುಂಬಾ ಆಪ್ತರಾಗಿರುವ ಶಾಸಕ ರಂಗನಾಥ್ ಅವರು, ಜುಲೈ 2 ರಂದು ನಡೆದ ಡಿಕೆಶಿ ಪದಗ್ರಹಣ ಸಮಾರಂಭದಲ್ಲೂ ಭಾಗಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ ಕೆ.ಸಿ.ವೇಣುಗೋಪಾಲ್, ಮಲ್ಲಿಕಾರ್ಜುನ ಖರ್ಗೆ, ಬಿ.ಕೆ. ಹರಿಪ್ರಸಾದ್, ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಸೇರಿದಂತೆ ಸುಮಾರು 200 ಮುಖಂಡರು ಪಾಲ್ಗೊಂಡಿದ್ದರು. ರಂಗನಾಥ್ ಅವರು ಡಿಕೆಶಿ ಸೇರಿ ಎಲ್ಲ ಹಿರಿಯ ನಾಯಕರ ಬಳಿಗೆ ತೆರಳಿ ಮಾತನಾಡಿಸಿದ್ದರು.
ಇದೀಗ ಶಾಸಕರಿಗೆ ಸೋಂಕು ದೃಢಪಟ್ಟ ವಿಚಾರ ಗೊತ್ತಾಗುತ್ತಿದ್ದಂತೆ ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿದ್ದ ಮತ್ತು ಅವರ ಸಂಪರ್ಕ ಹೊಂದಿದ್ದ ರಾಜ್ಯ ಮತ್ತು ರಾಷ್ಟ್ರ ಮಟ್ಟದ ನಾಯಕರಲ್ಲೂ ಆತಂಕ ಶುರುವಾಗಿದೆ.








