ಬೆಂಗಳೂರು: ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಅವರಿಗೂ ಮಹಾಮಾರಿ ಕೊರೊನಾ ವಕ್ಕರಿಸಿದೆ. ತಲೆನೋವು, ಗಂಟಲು ನೋವು ಇದ್ದಕಾರಣ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಾಗ ಕೊರೊನಾ ಪಾಸಿಟಿವ್ ಬಂದಿದೆ ಎಂದು ಸುಮಲತಾ ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಕಳೆದ ಶನಿವಾರ ನನಗೆ ಸ್ವಲ್ಪ ತಲೆನೋವು ಮತ್ತು ಗಂಟಲು ನೋವು ಕಾಣಿಸಿಕೊಂಡಿತ್ತು. ನಿರಂತರವಾಗಿ ನನ್ನ ಕ್ಷೇತ್ರದ ಕಾರ್ಯಗಳಲ್ಲಿ ತೊಡಗಿದ್ದರಿಂದ ಮತ್ತು ಕೊರೊನಾ ಪೀಡಿತ ಪ್ರದೇಶಗಳಿಗೂ ಭೇಟಿ ಕೊಟ್ಟಿದ್ದೆ. ಹೀಗಾಗಿ ನಾನು ಸ್ವಯಂ ಕೋವಿಡ್-19 ಪರೀಕ್ಷೆಗೆ ಒಳಗಾದೆ. ಇವತ್ತು ಪಾಸಿಟಿವ್ ಎಂದು ಫಲಿತಾಂಶ ಬಂದಿದೆ. ಹಾಗಾಗಿ ವೈದ್ಯರ ಸಲಹೆ ಪಡೆದುಕೊಂಡು ಅಗತ್ಯ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದೇನೆ. ಮನೆಯಲ್ಲಿಯೇ ಕ್ವಾರಂಟೈನ್‍ಗೆ ಒಳಪಟ್ಟಿದ್ದೀನಿ.
ರೋಗ ನಿರೋಧಕ ಶಕ್ತಿಯು ನನ್ನಲ್ಲಿ ಪ್ರಬಲವಾಗಿದೆ. ನಿಮ್ಮ ಆಶೀರ್ವಾದ ನನ್ನ ಮೇಲೆ ಇರುವುದರಿಂದ ಬೇಗ ಗುಣಮುಖ ಆಗುತ್ತೇನೆ. ಈಗಾಗಲೇ ನನ್ನನ್ನು ಭೇಟಿಯಾದ ವ್ಯಕ್ತಿಗಳ ವಿವರವನ್ನು ಸರಕಾರಿ ಅಧಿಕಾರಿಗಳಿಗೆ ಕೊಟ್ಟಿರುವೆ. ಆದರೂ ನನ್ನನ್ನು ಭೇಟಿಯಾದವರಲ್ಲಿ ಯಾರಿಗಾದರೂ ಕೋವಿದ್ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಪರೀಕ್ಷೆ ಮಾಡಿಸಲು ವಿನಂತಿಸುತ್ತೇನೆ. ನಿಮ್ಮ ಹಾರೈಕೆ ಇರಲಿ ಎಂದು ಫೇಸ್‍ಬುಕ್‍ನಲ್ಲಿ ಮನವಿ ಮಾಡಿದ್ದಾರೆ.








