ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕೊರೊನಾ ಸೋಂಕಿಗೆ ತುತ್ತಾಗಿರುವುದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ‘ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಅವರು ಕೊರೊನಾ ಸೋಂಕಿಗೆ ತುತ್ತಾಗಿರುವ ಸುದ್ದಿ ತಿಳಿದು ಬೇಸರವಾಯಿತು. ಆದಷ್ಟು ಬೇಗ ಸೋಂಕಿನಿಂದ ಗುಣಮುಖರಾಗಿ ಜನಸೇವೆಗೆ ಮರಳಲಿ ಎಂದು ಹಾರೈಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ.
ಡಿ.ಕೆ. ಶಿವಕುಮಾರ್ ಅವರು ಎರಡು ದಿನಗಳಿಂದ ಜ್ವರ ಮತ್ತು ಬೆನ್ನು ನೋವಿನಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಂಡಿದ್ದ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಬಗ್ಗೆ ಖುದ್ದು ಡಿ.ಕೆ. ಶಿವಕುಮಾರ್ ಖಚಿತಪಡಿಸಿದ್ದಾರೆ. ಸದ್ಯ ಡಿಕೆಶಿ ಬೆಂಗಳೂರಿನ ರಾಜಾಜಿನಗರದ ಸುಗುಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.








