ಬೆಂಗಳೂರು : ಕೊರೊನಾ ವೈರಸ್ ವಿಚಾರವಾಗಿ ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಕೇಂದ್ರ, ರಾಜ್ಯ ಸರ್ಕಾರಗಳ ವಿರುದ್ಧ ವಿಧಾನಸೌಧದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಇಂದು ವಿಧಾನಸಭೆಯಲ್ಲಿ ನೆರೆ ಹಾಗೂ ರಾಜ್ಯದ ಜ್ವಲಂತ ಸಮಸ್ಯೆಗಳ ಕುರಿತು ಚರ್ಚೆಗೆ ನಿಲುವಳಿ ಮಂಡನೆ ವೇಳೆ ಮಾತನಾಡಿದ ಸಿದ್ದರಾಮಯ್ಯ, ದೇಶದಲ್ಲಿ ಕೊರೊನಾ ಬಹಳ ವ್ಯಾಪಕವಾಗಿ ಹರಡಿ ಹೋಗಿದೆ.
ಇದಕ್ಕೆ ಕೇಂದ್ರ ಸರ್ಕಾರವೇ ಕಾರಣ. ಫೆಬ್ರುವರಿ ತಿಂಗಳಲ್ಲೇ ಕೇಂದ್ರ ಸರ್ಕಾರ ಸರಿಯಾದ ಕ್ರಮ ಕೈಗೊಂಡಿದ್ದರೆ ಕೋವಿಡ್-19 ರೋಗ ಇಷ್ಟು ಉಲ್ಬಣಗೊಳ್ಳುತ್ತಿರಲಿಲ್ಲ ಎಂದು ಅಭಿಪ್ರಾಯಪಟ್ಟರು.
ಫೆಬ್ರವರಿ ತಿಂಗಳಲ್ಲೇ ವಿದೇಶಗಳಿಂದ ವಿಮಾನಗಳು ಬರದಂತೆ ತಡೆಯಬೇಕಿತ್ತು. ಅದನ್ನು ಮಾಡದೇ ಈಗ ಕೊರೊನಾ ಉಲ್ಬಣಗೊಂಡಂತಾಗಿದೆ. ಕೇಂದ್ರ ಸರ್ಕಾರ ತಬ್ಲಿಘಿ ಸಮಾವೇಶ ನಡೆಸಲು ಅನುಮತಿ ಕೊಡ್ತು.
ಕೇಂದ್ರ ಸರ್ಕಾರವೇ ಇದಕ್ಕೆ ಹೊಣೆ. ಮಾರ್ಚ್ 24ಕ್ಕಿಂತ ಮುಂಚೆಯೇ ಲಾಕ್ ಡೌನ್ ಮಾಡಬೇಕಿತ್ತು. ತಬ್ಲಿಘಿ ಸಮಾವೇಶಕ್ಕೆ ಅವಕಾಶ ಕೊಡಬಾರದಿತ್ತು. ಮಾಸ್ಕ್, ವೆಂಟಿಲೇಟರ್, ಸ್ಯಾನಿಟೈಸರ್ ಎಲ್ಲವನ್ನೂ ಸಿದ್ಧವಾಗಿ ಇಟ್ಟುಕೊಳ್ಳಬೇಕಿತ್ತು ಎಂದು ಸಿದ್ದರಾಮಯ್ಯ ಹೇಳಿದರು.
ಕೇಂದ್ರ ಸರಕಾರ ಸರಿಯಾದ ಕ್ರಮ ಕೈಗೊಳ್ಳದ ಪರಿಣಾಮ ಇವತ್ತು ನಿತ್ಯವೂ 90 ಸಾವಿರ ಪ್ರಕರಣಗಳು ದಾಖಲಾಗುತ್ತಿವೆ. ವೆಂಟಿಲೇಟರ್ ಇಲ್ಲದೆ ಅದೆಷ್ಟೋ ಜನರು ಸತ್ತಿದ್ದಾರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.
ಮುಂದುವರಿದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ, ಕೊರೊನಾ ಸಾವಿನ ವಿಚಾರದಲ್ಲಿ ರಾಜ್ಯ ಏಳನೇ ಸ್ಥಾನದಲ್ಲಿದೆ.
ಸರ್ಕಾರ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದರು. ಈ ವೇಳೆ ಮಧ್ಯೆ ಪ್ರವೇಶಿಸಿದ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್, ಕೊರೊನಾ ವಿಚಾರದಲ್ಲಿ ನಾವು ಯಾವುದೇ ಸುಳ್ಳು ಹೇಳಿಲ್ಲ ಎಂದರು.
ಬಳಿಕ ಮಾತು ಮುಂದುವರಿಸಿದ ಸಿದ್ದರಾಮಯ್ಯ, ಸರ್ಕಾರಕ್ಕೆ ಸಲಹೆ ನೀಡಿ ನಾನು ಬರೆದ 20 ಪತ್ರಗಳಿಗೂ ಯಾವುದೇ ಉತ್ತರ ಬಂದಿಲ್ಲ.
ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರುವ ಸರ್ಕಾರ ಎಂದು ಇದನ್ನು ಕರೆಯಬೇಕಾ ಮಾರ್ಚ್ ನಿಂದ ಜುಲೈವರೆಗೂ ನಾವು ಸರ್ಕಾರಕ್ಕೆ ಸಹಕಾರ ಕೊಡುತ್ತಾ ಬಂದೆವು.
ಆದರೂ ನಮ್ಮ ಮಾತನ್ನ ಸರ್ಕಾರ ನಿರ್ಲಕ್ಷ್ಯ ಮಾಡಿಕೊಂಡು ಬಂತು ಎಂದು ಸಿದ್ದರಾಮಯ್ಯ ವಿಷಾದ ವ್ಯಕ್ತಪಡಿಸಿದರು.








