ರಾಜ್ಯದಲ್ಲಿ ಆ.23 ರಿಂದ ಎರಡು ಹಂತದಲ್ಲಿ ಶಾಲಾ-ಕಾಲೇಜು ಆರಂಭ
ಬೆಂಗಳೂರು : ಮಹಾ ಬಲಿಗೆ ಕೊರೊನಾ ಮೂರನೇ ಅಲೆ ಬಾಯ್ತೆರೆದು ಕಾಯುತ್ತಿದೆ. ತಜ್ಞರು ಕೊರೊನಾ ಮೂರನೇ ಅಲೆ ಬಗ್ಗೆ ಎಚ್ಚರಿಕೆ ನೀಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಇದೀಗ ರಾಜ್ಯ ಸರ್ಕಾರ ಆಗಸ್ಟ್ 23 ರಿಂದ ಶಾಲಾ – ಕಾಲೇಜು ಆರಂಭಿಸಲು ಮುಂದಾಗಿದೆ.
ಕೊರೊನಾ ಸೋಂಕು ನಿಯಂತ್ರಣ ಸಂಬಂಧ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಜ್ಞರ ಜೊತೆ ಸಭೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಶಾಲಾ ಕಾಲೇಜು ಆರಂಭದ ಬಗ್ಗೆ ಮಾತನಾಡಿ, ಇಂದಿನ ಸಭೆಯಲ್ಲಿ ಶಾಲಾ, ಕಾಲೇಜು ಪ್ರಾರಂಭದ ಬಗ್ಗೆ ಚರ್ಚೆ ನಡೆದಿದ್ದು, ಎರಡು ಹಂತದಲ್ಲಿ ಶಾಲಾ, ಕಾಲೇಜುಗಳು ಪ್ರಾರಂಭವಾಗಲಿದೆ.
ಮೊದಲ ಹಂತ 9ರಿಂದ 12ನೇ ತರಗತಿವರೆಗೆ ಆಗಸ್ಟ್ 23 ರಿಂದ ಆರಂಭವಾಗಲಿದೆ. ಆಗಸ್ಟ್ ಕೊನೆಯ ವಾರದಲ್ಲಿ ಪರಿಸ್ಥಿತಿ ನೋಡಿಕೊಂಡು 1 ರಿಂದ 8 ತರಗತಿವರೆಗಿನ ಶಾಲೆಗಳನ್ನು ಓಪನ್ ಮಾಡುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಅಲ್ಲದೆ ದಕ್ಷಿಣ ಕನ್ನಡ, ಕೊಡಗು, ಮೈಸೂರು, ಚಾಮರಾಜನಗರ, ಬೆಳಗಾವಿ, ಬೀದರ್, ಕಲುಬುರಗಿ, ವಿಜಯಪುರದಲ್ಲಿ ಶನಿವಾರ, ಭಾನುವಾರ ಲಾಕ್ ಡೌನ್ ಜಾರಿಯಲ್ಲಿರಲಿದೆ. ರಾಜ್ಯಾದ್ಯಂತ ನೈಟ್ ಕಫ್ರ್ಯೂ ಅವಧಿಯನ್ನು ಹೆಚ್ಚಿಸಲಾಗಿದ್ದು, ರಾತ್ರಿ 10ರ ಬದಲಾಗಿ ರಾತ್ರಿ 9 ರಿಂದ ಬೆಳಗ್ಗೆ 5 ಗಂಟೆಯವರೆಗೆ ಇರಲಿದೆ ಎಂದು ವಿವರಿಸಿದ್ದಾರೆ.









