ಬೆಳ್ತಂಗಡಿ : ಹೆಮ್ಮಾರಿ ಕೊರೊನಾ ವೈರಸ್ ನಗರ ಪ್ರದೇಶಗಳಿಂದ ಗ್ರಾಮಗಳತ್ತ ತನ್ನ ಕಬಂದ ಬಾಹುಗಳನ್ನು ಚಾಚುತ್ತಿದೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಹಳ್ಳಿ ಪ್ರದೇಶಗಳಲ್ಲೂ ಸೋಂಕು ಕಾಣಿಸಿಕೊಂಡು ಆತಂಕ ಸೃಷ್ಠಿಸಿದೆ.
ಬೆಳ್ತಂಗಡಿ ತಾಲೂಕಿನ ಉಜಿರೆ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುತ್ತಿದ್ದ ಯುವತಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಬೆಳ್ತಂಗಡಿ ಭಾಗದ ಜನರಲ್ಲಿ ಭಯ ಶುರುವಾಗಿದೆ. ಸೋಂಕಿತೆ ಮುಂಡಾಜೆಯ ನಿವಾಸಿಯಾಗಿದ್ದು, ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆ ಈಕೆಯ ಗಂಟಲು ದ್ರವ ತೆಗೆದುಕೊಂಡು ಕೊರೊನಾ ಪರೀಕ್ಷೆಗೆ ಕಳುಹಿಸಲಾಗಿತ್ತು. ಇದೀಗ ವರದಿ ಬಂದಿದ್ದು, ಈಕೆಗೆ ಸೋಂಕಿರುವು ದೃಢಪಟ್ಟಿದೆ.
ಸದ್ಯ ಈಕೆ ಕೆಲಸ ಮಾಡುತ್ತಿದ್ದ ಪೆಟ್ರೋಲ್ ಬಂಕ್ ಅನ್ನು ಸೀಲ್ ಡೌನ್ ಮಾಡಲು ಅಧಿಕಾರಿಗಳು ತಯಾರಿ ನಡೆಸಿದ್ದು, ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಇನ್ನೊಂದೆಡೆ ಈ ಬಂಕ್ ನಲ್ಲಿ ಸಾಕಷ್ಟು ಮಂದಿ ಪೆಟ್ರೋಲ್ ಹಾಕಿಸಿಕೊಂಡಿದ್ದು, ಅವರಲ್ಲೂ ಆತಂಕ ಮನೆ ಮಾಡಿದೆ. ಇನ್ನು ಈಕೆಯ ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನೂ ಈಗಾಗಲೇ ಕ್ವಾರಂಟೈನ್ ಮಾಡಲಾಗಿದೆ.








