ಉಳ್ಳಾಲದ ಒಂದೇ ಮನೆಯ 17 ಮಂದಿಗೆ ಕೊರೊನಾ ಸೋಂಕು
ಉಳ್ಳಾಲ, ಜೂನ್ 27: ಉಳ್ಳಾಲದಲ್ಲಿ ಒಂದೇ ಮನೆಯ 17 ಸದಸ್ಯರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಈ ಮೊದಲು ಉಳ್ಳಾಲ ಆಝಾದ್ ನಗರದ 57ರ ಹರೆಯದ ಮಹಿಳೆಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಅವರನ್ನು ನಗರದ ವೆನ್ ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ . ಈ ಹಿನ್ನೆಲೆಯಲ್ಲಿ ಎರಡು ದಿನಗಳ ಹಿಂದೆ ಅವರ ಸಂಪರ್ಕದಲ್ಲಿದ್ದ ಎಲ್ಲಾ 16 ಮಂದಿಯನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದೀಗ ಎಲ್ಲಾ 16 ಸದಸ್ಯರ ಗಂಟಲು ದ್ರವ ಪರೀಕ್ಷಾ ವರದಿ ಹೊರಬಂದಿದ್ದು, ಎಲ್ಲರಿಗೂ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಮನೆಯ ಇಬ್ಬರು ಸದಸ್ಯರು ಸೌದಿಯಿಂದ ಬಂದಿದ್ದು, ಅವರು ಖಾಸಗಿ ಕ್ವಾರಂಟೈನ್‍ನಲ್ಲಿದ್ದು, ಇವರ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ.
ಈಗಾಗಲೇ ಉಳ್ಳಾಲದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಸಾಮುದಾಯಿಕವಾಗಿ ಹಬ್ಬುವ ಆತಂಕ ಎದುರಾಗಿದೆ.
ಉಳ್ಳಾಲ ವ್ಯಾಪ್ತಿಯಲ್ಲಿ ಪೊಲೀಸರು ಸೇರಿದಂತೆ 22 ಮಂದಿಯಲ್ಲಿ ಶನಿವಾರ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಹಿಂದೆ ಉಳ್ಳಾಲ ಪೊಲೀಸ್ ಠಾಣೆಯ ಇಬ್ಬರು ಪೊಲೀಸ್ ಅಧಿಕಾರಿಗಳಿಗೆ ಕೊರೊನಾ ಸೋಂಕು ತಗುಲಿದ್ದು, ಇವರ ಸಂಪರ್ಕದಲ್ಲಿದ್ದ ಇಬ್ಬರು ಸಿಬಂದಿಗಳಿಗೆ ಶನಿವಾರ ಸೋಂಕು ದೃಢಪಟ್ಟಿದೆ.
ಉಳಿದಂತೆ ವಿದೇಶದಿಂದ ಆಗಮಿಸಿ ಉಳ್ಳಾಲದ ಖಾಸಗಿ ರೆಸಾರ್ಟ್ ನಲ್ಲಿ ಕ್ವಾರಂಟೈನ್ ನಲ್ಲಿರುವ ಇಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ದೇರಳಕಟ್ಟೆಯಲ್ಲಿರುವ ಖಾಸಗಿ ಆಹಾರ ತಯಾರಿಕೆ ಸಂಸ್ಥೆಯ ಇಬ್ಬರಿಗೆ ಸೋಂಕು ದೃಢಪಟ್ಟಿದ್ದು, ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.