ತಮಿಳುನಾಡು ಎರಡನೇ ದಿನವೂ 3000 ದಾಟಿದ ಕೊರೊನಾ ಪ್ರಕರಣ
ಚೆನ್ನೈ, ಜೂನ್ 27: ಕಳೆದ 24 ಗಂಟೆಗಳಲ್ಲಿ ತಮಿಳುನಾಡಿನಲ್ಲಿ ಹೊಸ ಕೋವಿಡ್ -19 ಪ್ರಕರಣಗಳು ಅತಿ ಹೆಚ್ಚು ಏರಿಕೆ ಕಂಡಿದ್ದು, ರಾಜ್ಯದ ವೈರಸ್ ಪ್ರಕರಣಗಳ ಸಂಖ್ಯೆ 75,000 ತಲುಪಿದೆ. ಕಳೆದ 24 ಗಂಟೆಗಳಲ್ಲಿ 3,645 ಹೊಸ ಕೋವಿಡ್ -19 ಪ್ರಕರಣಗಳು ತಮಿಳುನಾಡಿನಲ್ಲಿ ವರದಿಯಾಗಿದ್ದು, ಈ ಮೂಲಕ ಕೊರೊನಾ ಪ್ರಕರಣಗಳ ಸಂಖ್ಯೆ 74,622 ಕ್ಕೆ ತಲುಪಿದೆ.
ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ತಮಿಳುನಾಡು ಸರ್ಕಾರ ಚೆನ್ನೈ, ಮಧುರೈ ಸೇರಿದಂತೆ ನಾಲ್ಕೈದು ಜಿಲ್ಲೆಗಳಲ್ಲಿ ಲಾಕ್‌ಡೌನ್ ಜಾರಿ ಮಾಡಿದ್ದರೂ ಕೂಡ ರಾಜ್ಯದಲ್ಲಿ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ. ದೇಶದಲ್ಲಿ ಮಹಾರಾಷ್ಟ್ರ ಬಿಟ್ಟರೆ ಅತಿ ಹೆಚ್ಚು ಕೊರೊನಾ ಸೋಂಕಿತರನ್ನು ಹೊಂದಿರುವ ರಾಜ್ಯ ತಮಿಳುನಾಡು ಆಗಿದೆ. ರಾಜ್ಯ ರಾಜಧಾನಿ ಚೆನ್ನೈನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 47,712ಕ್ಕೆ ಏರಿಕೆಯಾಗಿದೆ.
ಚೆನ್ನೈನಲ್ಲಿ ಲಾಕ್‌ಡೌನ್ ಜಾರಿಯಲ್ಲಿ ಇದ್ದರೂ ಒಂದೇ ದಿನದಲ್ಲಿ 1956 ಕೊರೊನಾ ಪ್ರಕರಣ ಪತ್ತೆಯಾಗಿದೆ. ಕಳೆದ 24 ಗಂಟೆಯ ಅವಧಿಯಲ್ಲಿ 46 ಜನರು ಮೃತಪಟ್ಟಿದ್ದು, ಕೊರೊನಾಕ್ಕೆ ಬಲಿಯಾದವರ ಸಂಖ್ಯೆ 957ಕ್ಕೆ ಏರಿದೆ. ಪ್ರಸ್ತುತ ರಾಜ್ಯದಲ್ಲಿ 32,305 ಕೇಸ್ ಸಕ್ರಿಯವಾಗಿದೆ.
ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ತೀವ್ರ ಏರಿಕೆಯಾಗಿದ್ದರೂ ಮತ್ತು ಸತತ ಎರಡನೇ ದಿನವೂ 40 ಕ್ಕೂ ಹೆಚ್ಚು ಸಾವುಗಳು ದಾಖಲಾಗಿದ್ದರೂ ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿಯ ಸರ್ಕಾರ ಕೈಗೊಂಡ ಕ್ರಮಗಳಿಂದ ಕೊರೊನಾ ಹರಡುವಿಕೆ ನಿಯಂತ್ರಣದಲ್ಲಿದೆ ಎಂದು ಹೇಳಿದ್ದಾರೆ.