ಗದಗ: ಗಂಟಲು ನೋವು, ಹೊಟ್ಟೆ ಉರಿ ಎಂದು ಯುವಕನೋರ್ವ ರಸ್ತೆಯಲ್ಲಿ ಬಿದ್ದು ಒದ್ದಾಡುತ್ತಿದ್ದರೂ ಯಾರೊಬ್ಬರೂ ಆತನ ಹತ್ತಿರ ಬಾರದ ಘಟನೆ ಗದಗ ನಗರದಲ್ಲಿ ನಡೆದಿದೆ.
ಗದಗ್‍ನ ಬೆಟಗೇರಿಯಲ್ಲಿ ಕುರಹಟ್ಟಿಪೇಟೆಯ ಯುವಕ ರಸ್ತೆ ಮೇಲೆ ಬಿದ್ದು ಒದ್ದಾಡುತ್ತಿದ್ದ. ಆದರೆ, ಆತನಿಗೆ ಕೊರೊನಾ ಬಂದಿರಬಹುದು. ಹೀಗಾಗಿ ಆತ ರಸ್ತೆ ಮೇಲೆ ಬಿದ್ದು ಒದ್ದಾಡುತ್ತಿದ್ದಾನೆ. ಆತನನ್ನು ಮುಟ್ಟಿದರೆ ತಮಗೂ ಕೊರೊನಾ ಬರುತ್ತದೆ ಎಂದು ಭಾವಿಸಿದ ಜನರು ಆತನ ನೆರವಿಗೆ ಬರಲೇ ಇಲ್ಲ.

ಹಲವು ಸಮಯದ ನಂತರ ಆತ ರಸ್ತೆಯಲ್ಲೇ ಬಿದ್ದು ನರಳಾಡುತ್ತಿರುವುದನ್ನು ನೋಡಿದ ವ್ಯಕ್ತಿಯೊಬ್ಬರು ಅತನನ್ನು ಮೇಲಕ್ಕೆ ಎತ್ತಿ ಆರೈಕೆ ಮಾಡಿದ್ದಾರೆ.
ಆತನನ್ನು ಆಸ್ಪತ್ರೆಗೆ ಸಾಗಿಸಲು ಸ್ಥಳೀಯರು 108 ಆಂಬ್ಯುಲೆನ್ಸ್‍ಗೆ ಕರೆ ಮಾಡಿದರೂ ಬರಲಿಲ್ಲ. ಒಂದು ಗಂಟೆ ಬಳಿಕ ಬಂದ ಅಂಬ್ಯುಲೆನ್ಸ್ ಮೂಲಕ ಯುವಕನನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಘಟನೆ ನಡೆದ ಕೂಡಲೇ ಕರೆ ಮಾಡಿದರೂ ತಡವಾಗಿ ಬಂದ ಆಂಬ್ಯುಲೆನ್ಸ್ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.








