ಹಾವೇರಿ: ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೆಮ್ಮು, ಜ್ವರ ಮತ್ತು ಉಸಿರಾಟದ ಸಮಸ್ಯೆಯಿಂದ ಬಳುತ್ತಿದ್ದ ವ್ಯಕ್ತಿಯೊಬ್ಬರು ಮನೆಯಲ್ಲೇ ನರಳಾಡಿದ ಘಟನೆ ಹಾವೇರಿಯಲ್ಲಿ ನಡೆದಿದೆ.

ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಹಿರೇಮುಗದೂರು ಗ್ರಾಮದ ಮನೆಯಲ್ಲಿರುವ ಐವತ್ತು ವರ್ಷದ ಸೋಂಕಿತನನ್ನು ಆಸ್ಪತ್ರೆಗೆ ಶಿಫ್ಟ್ ಮಾಡದೆ ನಿರ್ಲಕ್ಷ್ಯ ಮಾಡಲಾಗಿದೆ ಎಂದು ಕುಟುಂಬಸ್ಥರು ಅರೋಪಿಸಿದ್ದಾರೆ.
ಜುಲೈ16ರಂದು ಜಿಲ್ಲಾಸ್ಪತ್ರೆಯಲ್ಲಿ ಗಂಟಲು ದ್ರವದ ಮಾದರಿ ನೀಡಿ ಮನೆಯಲ್ಲಿದ್ದ ಸೋಂಕಿತನ ಕೊರೊನಾ ರಿಪೋರ್ಟ್ ನಿನ್ನೆ ಮಧ್ಯಾಹ್ನ ಬಂದಿತ್ತು. ವರದಿಯಲ್ಲಿ ಕೊರೊನಾ ಪಾಸಿಟಿವ್ ಬಂದಿದೆ ಎಂದು ಆರೋಗ್ಯ ಇಲಾಖೆ ಸಿಬ್ಬಂದಿ ದೂರವಾಣಿ ಮೂಲಕ ಮಾಹಿತಿ ನೀಡಿದ್ದರು. ನಿನ್ನೆ ಮಧ್ಯಾಹ್ನವೆ ವರದಿ ಬಂದಿದ್ರೂ ಈವರೆಗೂ ಆಸ್ಪತ್ರೆಗೆ ಶಿಫ್ಟ್ ಮಾಡದೆ ನಿರ್ಲಕ್ಷ್ಯ ವಹಿಸಲಾಗಿದೆ. ಕೆಮ್ಮು, ಜ್ವರ ಮತ್ತು ಉಸಿರಾಟದ ಸಮಸ್ಯೆಯಿಂದಾಗಿ ಸೋಂಕಿತ ಮನೆಯಲ್ಲೇ ಒದ್ದಾಡ್ತಿರುವ ವಿಡಿಯೋ ವೈರಲ್ ಆಗಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ನರಳಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಸೋಂಕಿತನ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.









