ಜೀವಾವಧಿ ಶಿಕ್ಷೆ ವಿಧಿಸಿದಕ್ಕೆ ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಕಿಡಿಗೇಡಿ
ಗುಜರಾತ್ : 5 ವರ್ಷದ ಬಾಲಕಿಯ ಅತ್ಯಾಚಾರ ಹಾಗೂ ಕೊಲೆ ಅಪರಾಧಿಗೆ ಜೀವಾವಾಧಿ ಶಿಕ್ಷೆ ವಿಧಿಸಿದ ಹಿನ್ನೆಲೆ , ಕಿಡಿಗೇಡಿಯು ನ್ಯಾಯಾಧೀಶರ ಮೇಲೆಯೇ ಚಪ್ಪಲಿ ಎಸೆದಿರುವ ಘಟನೆ ಗುಜರಾತ್‌ನ ಸೂರತ್ ನ್ಯಾಯಾಲಯದಲ್ಲಿ ನಡೆದಿದೆ.
ವಿಶೇಷ ಪೋಕ್ಸೊ ನ್ಯಾಯಾಧೀಶ ಪಿ.ಎಸ್.ಕಾಳ ಅವರು ಅಪರಾಧಿಗೆ ಜೀವಾವಧಿ ಶಿಕ್ಷೆ ಪ್ರಕಟಿಸುತ್ತಿದ್ದರು. ಈ ವೇಳೆ ಕೋಪಗೊಂಡ ಅಪರಾಧಿ ಸುಜಿತ್ ಸಾಕತ್ ಎಂಬಾತ ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದಿದ್ದಾನೆ. ಗುರಿ ತಪ್ಪಿದ ಚಪ್ಪಲಿ ಸಾಕ್ಷಿ ಪೆಟ್ಟಿಗೆ ಬಳಿ ಬಿದ್ದಿದೆ.
ಅಪರಾಧಿ ಮಧ್ಯಪ್ರದೇಶ ಮೂಲದವನಾಗಿದ್ದು, ಏಪ್ರಿಲ್ 30 ರಂದು 5 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ. ಕೊಲೆಯಾದ ಬಾಲಕಿ ವಲಸೆ ಕಾರ್ಮಿಕರ ಮಗಳಾಗಿದ್ದಳು. ಮನೆಯಲ್ಲಿ ಒಬ್ಬಳೇ ಇದ್ದಾಗ ಚಾಕೊಲೇಟ್ ಕೊಡಿಸುವ ಆಮೀಷ ಒಡ್ಡಿ ಬಾಲಕಿಯನ್ನು ಅಪಹರಿಸಿದ್ದ ಕಾಮುಕ ಆಕೆಯ ಮೇಲೆ ಅತ್ಯಾಚಾರವೆಸಗಿ ಕತ್ತು ಹಿಸುಕಿ ಕೊಲೆ ಮಾಡಿದ್ದ. ನಂತರ ಆತನ ವಿರುದ್ಧ FIR ದಾಖಲಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಸಾಕ್ಷಿಗಳನ್ನು ಆಧರಿಸಿ ಅಪರಾಧಿಗೆ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.