ಮೇ ತಿಂಗಳಲ್ಲಿ ಕೇರಳದಲ್ಲಿ 182 ಕೋವಿಡ್-19 ಪ್ರಕರಣಗಳು ಪತ್ತೆಯಾಗಿದ್ದು, ಕೊರೊನಾ ಪ್ರಕರಣಗಳಲ್ಲಿ ಏರಿಕೆ ಕಂಡಿದೆ. ಆಗ್ನೇಯ ಏಷ್ಯಾದ ಇತರ ದೇಶಗಳಲ್ಲಿ ಕೂಡ ಕೊರೊನಾ ಪ್ರಕರಣಗಳು ವೇಗವಾಗಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಕರ್ನಾಟಕದ ನೆರೆಯ ರಾಜ್ಯ ಕೇರಳದಲ್ಲಿಯೂ ಕೋವಿಡ್ ಹಾವಳಿ ಮತ್ತೆ ಚಿಂತೆಗೆ ಕಾರಣವಾಗಿದೆ.
ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಈ ಕುರಿತು ಪ್ರಕಟಣೆಯ ಮೂಲಕ ಮಾತನಾಡಿ, ಇನ್ನೂ ಕೊರೊನಾ ತೀವ್ರ ಸ್ವರೂಪವನ್ನು ತಾಳದೆ ಇದ್ದರೂ, ಎಚ್ಚರಿಕೆಯಲ್ಲಿ ಇರಬೇಕಾದ ಸಮಯ ಇದು. ಸರಕಾರ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಆದರೆ ಸಾರ್ವಜನಿಕ ಸಹಕಾರವೂ ಅತ್ಯಗತ್ಯ, ಎಂದು ಹೇಳಿದ್ದಾರೆ
ಸಚಿವೆ ವೀಣಾ ತಮ್ಮ ಹೇಳಿಕೆಯಲ್ಲಿ ಕೆಲವು ಪ್ರಮುಖ ಸಲಹೆಗಳನ್ನೂ ನೀಡಿದ್ದಾರೆ:
ಜ್ವರ ಅಥವಾ ಸೋಂಕಿನ ಲಕ್ಷಣಗಳು ಕಾಣಿಸಿದರೆ ತಕ್ಷಣ ಪರೀಕ್ಷೆ ಮಾಡಿಸಿಕೊಳ್ಳಬೇಕು
ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ಉತ್ತಮ
ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಿ ಪ್ರಾಥಮಿಕ ಚಿಕಿತ್ಸೆ ಪಡೆಯುವುದು ಉತ್ತಮ
ಹಿರಿಯ ನಾಗರಿಕರು ಮತ್ತು ಹೃದಯ, ಶ್ವಾಸಕೋಶ ಸಮಸ್ಯೆ ಇರುವವರು ಹೆಚ್ಚು ಎಚ್ಚರಿಕೆಯಿಂದ ಇರಬೇಕು
ಈ ನಡುವೆ, ಕೇರಳ ಆರೋಗ್ಯ ಇಲಾಖೆ ಹೊಸ ಕೋವಿಡ್ ಲಕ್ಷಣಗಳ ಪರಿಶೀಲನೆಗೆ ಮುಂದಾಗಿದೆ. ಇದೀಗ ವರದಿಯಾದ 182 ಪ್ರಕರಣಗಳ ಹೆಚ್ಚಿನ ಪ್ರಮಾಣವು ಕೋಝಿಕ್ಕೋಡ್, ಎರ್ಣಾಕುಳಂ ಜಿಲ್ಲೆಗಳಿಂದ ಬಂದಿವೆ ಎನ್ನಲಾಗಿದೆ.







