ಬೆಂಗಳೂರು: ರಾಜ್ಯ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಗುರುವಾರ ನೀಡಿರುವ ವರದಿಯ ಆಧಾರದಲ್ಲಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಪ್ರಸ್ತುತ ವರ್ಷದಲ್ಲಿ ಶಾಲಾರಂಭ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.
ಸಚಿವ ಸುರೇಶ್ ಕುಮಾರ್ ಹೇಳಿಕೆ ಶಾಲೆಗಳನ್ನು ಆರಂಭಿಸಲು ಅನುಮತಿ ಕೊಡಲು ಮಾನಸಿಕವಾಗಿ ಸಜ್ಜಾಗಿದ್ದು ವೇದಿಕೆ ಸಿದ್ದಪಡಿಸಿಕೊಳ್ಳುತ್ತಿದೆ. ಇದಕ್ಕೆ ಮುಖ್ಯಮಂತ್ರಿಗಳ ಸಭೆಯ ಕಾರಣ ನೀಡುತ್ತಿದೆಯಾ ಎಂಬ ಪ್ರಶ್ನೆಗಳು ಎದ್ದಿವೆ.

ವಿಧಾನಸೌಧದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ರಾಜ್ಯ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯರೊಂದಿಗೆ ಚರ್ಚೆ ನಡೆಸಿದ ನಂತರ ಮಾತನಾಡಿದ ಸುರೇಶ್ ಕುಮಾರ್, ಇಂದಿನ ಸಭೆಯಲ್ಲಿ ರಾಜ್ಯದ ಕೋವಿಡ್ ಪರಿಸ್ಥಿತಿ ಕುರಿತಂತೆ ಶಾಲೆಗಳ ಆರಂಭದ ಹಿನ್ನೆಲೆಯಲ್ಲಿ ಸುದೀರ್ಘವಾಗಿ ಚರ್ಚಿಸಲಾಯಿತು ಎಂದು ಹೇಳಿದರು.
ರಾಜ್ಯದ ಪ್ರಸ್ತುತ ಕೋವಿಡ್ ಪ್ರಸರಣ, ಕೋವಿಡ್ ಪಾಸಿಟಿವ್ ಪ್ರಕರಣಗಳ ದಾಖಲು, ಮರಣ ಪ್ರಮಾಣ ಸೇರಿದಂತೆ ಕೋವಿಡ್ ಗೆ ಸಂಬಂಧಿಸಿದಂತೆ ಎಲ್ಲ ಸ್ತರಗಳಲ್ಲಿ ಚರ್ಚೆ ನಡೆಸಿ ಶಾಲೆಗಳ ಆರಂಭದ ವಿಚಾರದಲ್ಲಿ ಕೈಗೊಳ್ಳಬಹುದಾದ ಎಲ್ಲ ಸಂಗತಿಗಳನ್ನು ಸಮಿತಿ ಸದಸ್ಯರು, ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಸುದೀರ್ಘವಾಗಿ ಚರ್ಚಿಸಲಾಯಿತು ಎಂದು ಸಚಿವರು ವಿವರಿಸಿದ್ದಾರೆ.
ಪರಿಸ್ಥಿತಿಯನ್ನು ಅವಲೋಕಿಸಿ ತಾಂತ್ರಿಕ ಸಲಹಾ ಸಮಿತಿ ಯಾವ ಯಾವ ತರಗತಿಗಳನ್ನು ಯಾವ ದಿನಗಳಲ್ಲಿ ಪ್ರಾರಂಭಿಸಬಹುದು, ಪ್ರಾರಂಭಿಸುವಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಪ್ರಮಾಣಿತ ಕಾರ್ಯಾಚರಣೆ ವಿಧಾನ-ಎಸ್‍ಒಪಿಗಳನ್ನು ಸಿದ್ಧಪಡಿಸಿಕೊಟ್ಟಿದ್ದು, ಅದರ ಆಧಾರದಲ್ಲಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಶಾಲಾರಂಭಕ್ಕೆ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸುರೇಶ್ ಕುಮಾರ್ ಹೇಳಿದರು.
ಎಸ್‍ಎಸ್‍ಎಲ್‍ಸಿ, ಪಿಯುಸಿ ತರಗತಿ ಆರಂಭಕ್ಕೆ ಗ್ರೀನ್‍ಸಿಗ್ನಲ್ ?
ಮೊದಲಿಗೆ ಮುಂದಿನ ವ್ಯಾಸಂಗಕ್ಕೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಅಗತ್ಯವಾದ ಎಸ್‍ಎಸ್‍ಎಲ್‍ಸಿ ಮತ್ತು ದ್ವಿತೀಯ ಪಿಯುಸಿ ತರಗತಿಗಳನ್ನು ಮತ್ತು ಪರಿಷ್ಕøತ ವಿದ್ಯಾಗಮ ಆರಂಭಿಸುವ ಸಂಬಂಧದಲ್ಲಿ ಕ್ರಮಗಳ ಕುರಿತು ಸಲಹಾ ಸಮಿತಿ ಸಲಹೆ ನೀಡಿದೆ. ನಂತರ ಉಳಿದ ತರಗತಿಗಳ ಆರಂಭಕ್ಕೆ ಕ್ರಮವಹಿಸಲೂ ಸಹ ಸಮಿತಿ ಅಭಿಪ್ರಾಯಪಟ್ಟಿದೆ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.
ಕೋವಿಡ್-19 ಮುನ್ನೆಚ್ಚರಿಕೆ ಕ್ರಮಗಳನ್ನು ಖಾತರಿಪಡಿಸುವ ಮೂಲಸೌಲಭ್ಯಗಳನ್ನು ಮತ್ತು ಇತರೆ ಸೌಲಭ್ಯಗಳ ಗಮನಿಸಿದ ನಂತರವೇ ತರಗತಿಗಳನ್ನು ಆರಂಭಿಸುವುದು. ತರಗತಿಗಳಿಗೆ ಹಾಜರಾಗಬೇಕಾದ ವಿದ್ಯಾರ್ಥಿಗಳು ಶಾಲೆಗೆ ಬರುವ ಮೊದಲು ತಮ್ಮ ಪೋಷಕರಿಂದ ಅನುಮತಿ ಪತ್ರವನ್ನು ತರುವುದು ಕಡ್ಡಾಯವಾಗಿದೆ.

ಆರೋಗ್ಯದ ತೊಂದರೆ ಇಲ್ಲವೇ ಶೀತ, ನೆಗಡಿ, ಕೆಮ್ಮು ಹಾಗೆಯೇ ಕೋವಿಡ್ ಲಕ್ಷಣಗಳಿರುವ ಮಕ್ಕಳು ಶಾಲೆಗೆ ಬರುವಂತಿಲ್ಲ. ಅವರು ಪರೀಕ್ಷೆ ಮಾಡಿಸಿಕೊಂಡು ವೈದ್ಯಕೀಯ ವರದಿಯೊಂದಿಗೆ ಹಾಜರಾಗಬೇಕಿದೆ. ತಮ್ಮ ಮಕ್ಕಳಿಗೆ ರುಚಿ, ವಾಸನೆ ಕೊರತೆ, ಉಸಿರಾಟ ತೊಂದರೆ, ಗಂಟಲು ನೋವು ಸೇರಿದಂತೆ ಮೇಲ್ಕಂಡ ಯಾವುದೇ ಲಕ್ಷಣಗಳಿಲ್ಲ ಎಂದು ಪೋಷಕರು ತಾವು ತಮ್ಮ ಮಕ್ಕಳು ಶಾಲೆಗೆ ಹಾಜರಾಗುವಾಗ ನೀಡುವ ಅನುಮತಿ ಪತ್ರದಲ್ಲಿ ತಿಳಿಸುವುದು ಕಡ್ಡಾಯವಾಗಬೇಕು.
ಅಗತ್ಯ ಮುನ್ನೆಚ್ಚರಿಕೆಯ ಸುರಕ್ಷಾ ಕ್ರಮಗಳನ್ನು ಕೈಗೊಂಡು ಪರಿಣಾಮಕಾರಿಯಾಗಿ ಅನುಸರಿಸುತ್ತಿರುವುದರಿಂದ ಪದವಿ ಹಾಗೂ ಉನ್ನತ ಶಿಕ್ಷಣದ ತರಗತಿಗಳು ಸುಸೂತ್ರವಾಗಿ ನಡೆಯುತ್ತಿವೆ. ವಿದ್ಯಾರ್ಥಿಗಳು ಪಾಳಿಯಲ್ಲಿ ಕಡಿಮೆ ಸಂಖ್ಯೆಯಲ್ಲಿ ವಾರದಲ್ಲಿ ಎರಡು ದಿನಗಳು ಮಾತ್ರವೇ ಬರುವುದರಿಂದ ಸುರಕ್ಷಾ ಕ್ರಮಗಳನ್ನು ಪರಿಣಾಮಕಾರಿಯಾಗಿ ಕೈಗೊಳ್ಳಬಹುದು ಎಂದು ಸಮಿತಿ ಸದಸ್ಯರು ಅಭಿಪ್ರಾಯಪಟ್ಟಿದ್ದಾರೆ ಎಂದು ಸಚಿವರು ತಿಳಿಸಿದರು.
ಜುಲೈನಲ್ಲಿ ನಡೆದ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳಿಗೆ ಯಾವುದೇ ಸಂದರ್ಭದಲ್ಲೂ ಕೋವಿಡ್ ಪ್ರಸರಣವಾಗರಿಲಿಲ್ಲ ಎಂಬುದನ್ನು ಸಮಿತಿ ಈ ಸಂದರ್ಭದಲ್ಲಿ ಅವಲೋಕಿಸಿತು. ಶಾಲಾರಂಭಕ್ಕೂ ಮುನ್ನ ಡಿಸೆಂಬರ್ ಮಾಸದಲ್ಲಿ ಶಾಲಾಡಳಿತಗಳು/ ಶಾಲಾ ಮೇಲುಸ್ತುವಾರಿ ಸಮಿತಿಗಳು ಪೋಷಕರು ಮಕ್ಕಳು ಸೇರಿದಂತೆ ಇನ್ನಿತರೆ ಶೈಕ್ಷಣಿಕ ಪಾಲುದಾರರನ್ನು ಸಭೆ ನಡೆಸಿ ಶಾಲೆಗಳ ಪುನರಾರಂಭ ಕುರಿತು ವಿಶ್ವಾಸ ಮೂಡಿಸುವ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು ಎಂದು ಸಚಿವರು ವಿವರಿಸಿದ್ದಾರೆ.
ವಿದ್ಯಾರ್ಥಿಗಳು, ಶಿಕ್ಷಕರು, ಸಿಬ್ಬಂದಿಗೆ ಕೋವಿಡ್ ಪರೀಕ್ಷೆ
ವೈದ್ಯಕೀಯ ಪರೀಕ್ಷೆಗೆ ಅಗತ್ಯವಿರುವ ವಿದ್ಯಾರ್ಥಿಗಳು, ಶಿಕ್ಷಕರು, ಶಾಲಾ ಸಿಬ್ಬಂದಿಗೆ ಕೋವಿಡ್ ಪರೀಕ್ಷೆಗೆ ಮೊದಲ ಪ್ರಾಶಸ್ತ್ಯ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸಭೆಯಲ್ಲಿ ಆರೋಗ್ಯ ಇಲಾಖೆ ಆಯುಕ್ತರು ಅಭಿಪ್ರಾಯಪಟ್ಟಿದ್ದು, ಈ ಎಲ್ಲ ಸಂಗತಿಗಳನ್ನು ಮಾನ್ಯ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆಯುವ ವಿವಿಧ ಇಲಾಖೆಗಳ ಮುಖ್ಯಸ್ಥರ ಸಭೆಯಲ್ಲಿ ಚರ್ಚಿಸಿ ಎಲ್ಲರ ಸಹಕಾರ ಪಡೆದು ಶಾಲಾರಂಭಕ್ಕೆ ಮುಂದಿನ ನಿರ್ಧಾರಗಳನ್ನು ತೆಗೆದಕೊಳ್ಳಲಾಗುವುದು ಎಂದು ಸುರೇಶ್ ಕುಮಾರ್ ವಿವರಿಸಿದರು.
ಸಭೆಯಲ್ಲಿ ತಾಂತ್ರಿಕ ಸಲಹಾ ಸಮಿತಿಯ ಅಧ್ಯಕ್ಷ ಡಾ. ಸುದರ್ಶನ್, ಸದಸ್ಯರಾದ ಡಾ.ವಿ. ರವಿ, ಡಾ.ಎಂ. ಶರೀಫ್, ಡಾ. ಶಶಿಭೂಷಣ್ ಬಿ.ಎಲ್, ಡಾ.ಲೋಕೇಶ್ ಅಲ್ಹಾರಿ ಸೇರಿದಂತೆ ಕೋವಿಡ್ ಸಲಹಾ ಸಮಿತಿ ಸದಸ್ಯರಾದ ಹಲವಾರು ಸದಸ್ಯರು, ಆರೋಗ್ಯ ಇಲಾಖೆ ಆಯುಕ್ತ ಪಂಕಜ್ ಕುಮಾರ್ ಪಾಂಡೆ, ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ವಿ. ಅನ್ಬುಕುಮಾರ್, ಪಿಯು ನಿರ್ದೇಶಕಿ ಸ್ನೇಹಲ್ ಸೇರಿದಂತೆ ಶಿಕ್ಷಣ ಇಲಾಖೆ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಹಾಜರಿದ್ದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








