ದೆಹಲಿಯಲ್ಲಿ ಕೊರೊನಾ ನಾಲ್ಕನೇ ಅಲೆ ಪ್ರಾರಂಭ | ಒಬ್ಬ ಸೋಂಕಿತ ವ್ಯಕ್ತಿಯಿಂದ ಇಬ್ಬರಿಗೆ ಸೋಂಕು
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೊನಾ ನಾಲ್ಕನೇ ಅಲೆ ಪ್ರಾರಂಭವಾಗಿದ್ದು, ಒಬ್ಬ ಸೋಂಕಿತ ವ್ಯಕ್ತಿಯಿಂದ ಇಬ್ಬರಿಗೆ ಕೊರೊನಾ ಹರಡುತ್ತಿದೆ ಎಂಬ ಅಂಶ ಐಐಟಿ ಮದ್ರಾಸ್‍ನ ವರದಿಯೊಂದರಲ್ಲಿ ತಿಳಿಸಿದೆ.
ಐಐಟಿ-ಮದ್ರಾಸ್‍ನ ಗಣಿತಶಾಸ್ತ್ರ ವಿಭಾಗ ಮತ್ತು ಕಂಪ್ಯೂಟೇಶನಲ್ ಗಣಿತ ಮತ್ತು ದತ್ತಾಂಶ ವಿಜ್ಞಾನ ಕೇಂದ್ರದ ಪ್ರೊ.ನೀಲೇಶ್ ಎಸ್ ಉಪಾಧ್ಯೆಯ ಮತ್ತು ಪ್ರೊ.ಎಸ್ ಸುಂದರ್ ಅವರ ನೇತೃತ್ವದಲ್ಲಿ ನಡೆದ ಸರ್ವೇಯಲ್ಲಿ ಈ ಅಂಶ ಪತ್ತೆಯಾಗಿದೆ.
ಈಗಾಗಲೇ ದೇಶದ ವಿವಿಧ ನಗರಗಳಲ್ಲಿ ಓಮಿಕ್ರಾನ್ ಉಪತಳಿಗಳಾದ ಬಿಎ.2 ಮತ್ತು ಬಿಎ.2.12 ತಳಿ ಪತ್ತೆಯಾಗಿದೆ. ಮುಂಬೈ, ಚೆನ್ನೈ ಮತ್ತು ಕೋಲ್ಕತ್ತಾ ನಗರಗಳಲ್ಲಿ ಈ ತಳಿ ಪತ್ತೆಯಾದರೂ ಕೂಡ ದೆಹಲಿಯಷ್ಟು ತೀವ್ರ ಪ್ರಮಾಣದಲ್ಲಿ ಸೋಂಕು ಹರಡುತ್ತಿಲ್ಲ.
ದೆಹಲಿಯಲ್ಲಿ 1,000 ಹೆಚ್ಚು ಕೊರೊನಾ ಪ್ರಕರಣಗಳು ಪತ್ತೆಯಾಗುತ್ತಿದ್ದು, ಪಾಸಿಟಿವಿಟಿ ರೇಟ್ 4.64ಕ್ಕೆ ಏರಿಕೆ ಕಂಡಿದೆ. ಕೆಲ ಸೋಂಕಿತರಲ್ಲಿ ಬಿಎ.2.12 ಲಕ್ಷಣಗಳು ಪತ್ತೆಯಾಗಿದೆ.