ಶ್ರೀಕಾಕುಳಂ: ಮಾಹಾಮಾರಿ ಕೊರೊನಾನಿಂದ ಮೃತಪಟ್ಟ ರೋಗಿಯ ಮೃತದೇವನ್ನು ಜೆಸಿಬಿಯಲ್ಲಿ ಸಾಗಿಸಿಸುವ ಮೂಲಕ ಮಾನವೀಯತೆಯನ್ನೇ ಅಣಕಿಸಿದ ಘಟನೆ ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯಲ್ಲಿ ನಡೆದಿದೆ.
ಕಳೆದ ರಾತ್ರಿ ಶ್ರೀಕಾಕುಳಂ ಜಿಲ್ಲೆಯ ಪಾಲಸ ಪಟ್ಟಣದಲ್ಲಿ ಕೋವಿಡ್ ಆಸ್ಪತ್ರೆಯಲ್ಲಿ ಮೃತಪಟ್ಟ 70 ವರ್ಷದ ವೃದ್ಧರೊಬ್ಬರ ಮೃತದೇಹವನ್ನು ಸ್ಮಶಾನದವರೆಗೆ ಜೆಸಿಬಿಯಲ್ಲಿ ಸ್ಥಳಾಂತರ ಮಾಡಿ ಅಂತ್ಯಸಂಸ್ಕಾರ ನಡೆಸಲಾಗಿತ್ತು.
ಜೆಸಿಬಿಯಲ್ಲಿ ಶವ ಸಾಗಣೆ ವಿಡಿಯೋ ವೈರಲ್ ಆಗುತ್ತಿದ್ದಂತೆ ಪಾಲಸ ಪಟ್ಟಣ ಪಂಚಾಯಿತಿ ಅಧಿಕಾರಿಗಳ ವಿರುದ್ಧ ದೇಶಾದ್ಯಂತ ವ್ಯಕ್ತವಾಗಿದೆ. ಮೃತದೇಹಕ್ಕೆ ಅಂತಿಮ ಗೌರವವನ್ನು ನೀಡದೇ ಬೇಜವ್ದಾರಿಯಿಂದ ಜೆಸಿಬಿಯಲ್ಲಿ ಸಾಗಿಸಿ ಅವಮಾನ ಮಾಡಲಾಗಿದೆ.
ಇತ್ತೀಚೆಗೆ ದೆಹಲಿಯಲ್ಲಿ ನಡೆದ ಇಂತಹದ್ದೇ ಘಟನೆ ಉಲ್ಲೇಖಿಸಿದ್ದ ಸುಪ್ರೀಂಕೋರ್ಟ್, ಕೊರೊನಾ ಸೇರಿದಂತೆ ಯವುದೇ ಕಾರಣಗಳಿಂದ ಮೃತಪಟ್ಟರೂ ವ್ಯಕ್ತಿಯ ಮೃತದೇಹಕ್ಕೆ ಅಗೌರವ ಸಲ್ಲಿಸುವಂತಿಲ್ಲ. ಗೌರವಯುತವಾಗಿಯೇ ಅಂತ್ಯಸಂಸ್ಕಾರದ ವಿಧಿವಿಧಾನ ನಡೆಸಬೇಕು ಎಂದು ಕೋರ್ಟ್ ಸೂಚನೆ ನೀಡಿತ್ತು.
ಈ ಘಟನೆ ಮುಖ್ಯಮಂತ್ರಿ ಜಗನ್‍ಮೋಹನ್‍ರೆಡ್ಡಿ ನೇತೃತ್ವದ ಸರ್ಕಾರದ ಕಾರ್ಯವೈಖರಿಗೆ ಹಿಡಿದ ಕನ್ನಡಿ ಎಂದು ಮಾಜಿ ಸಿಎಂ ಹಾಗೂ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ತರಾಟೆಗೆ ತೆಗೆದುಕೊಂಡಿದ್ದಾರೆ.
ಪಾಲಸ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ಹೆಚ್ಚುತ್ತಿದ್ದಂತೆ ಮುಖ್ಯಮಂತ್ರಿ ಜಗನ್‍ಮೋಹನ್ ರೆಡ್ಡಿ ತೀವ್ರ ಆಸಮಾಧಾನ ವ್ಯಕ್ತಪಡಿಸಿದ್ದಾರೆ. ಮೃತದೇವನ್ನು ಜೆಸಿಬಿಯಲ್ಲಿ ಸಾಗಿಸಿದ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ ಅಮಾನತುಗೊಳಿಸುವಂತೆ ಜಗನ್ ಆದೇಶ ನೀಡಿದ್ದಾರೆ.
ಜಗನ್ ಆದೇಶ ಬರುತ್ತಿದ್ದಂತೆ ಪಾಲಸ ಮುನ್ಸಿಪಾಲಿಟಿ ಕಮೀಷನರ್ ಟಿ.ನಾಗೇಂದ್ರ ಕುಮಾರ್ ಹಾಗೂ ಸ್ಯಾನಿಟರಿ ಆರೋಗ್ಯಾಧಿಕಾರಿ ಎನ್.ರಾಜೀವನ್‍ನನ್ನು ಅಮಾನತು
ಮಾಡಲಾಗಿದೆ.