ಕೋವಿಡ್ ಟೆಸ್ಟ್ ಕಡಿಮೆ ಮಾಡಿದ್ದೇ ಸೋಂಕು ಹೆಚ್ಚಾಗಲು ಕಾರಣ : ಪ್ರತಾಪ್ ಸಿಂಹ
ಮೈಸೂರು : ಜಿಲ್ಲೆಯಲ್ಲಿ ಕೊರೊನಾ ಪರೀಕ್ಷೆ ಕಡಿಮೆ ಮಾಡಿದ್ದೇ ಸೋಂಕು ಹೆಚ್ಚಾಗಲು ಕಾರಣ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಜಿಲ್ಲೆಯಲ್ಲಿ ಸೋಂಕು ಹೆಚ್ಚಾಗುತ್ತಿರುವ ಬಗ್ಗೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಪ್ರತಿಕ್ರಿಯೆ ನೀಡಿದ ಪ್ರತಾಪ್ ಸಿಂಹ, ನಾವು ಕೋವಿಡ್ ಪರೀಕ್ಷೆ ಕಡಿಮೆ ಮಾಡಬಾರದಿತ್ತು,
ನಮ್ಮ ಹಾಗೂ ಜನರ ನಿರ್ಲಕ್ಷ್ಯದಿಂದಾಗಿ ಜಿಲ್ಲೆಯಲ್ಲಿ ಕೋವಿಡ್ ಹರಡಿದೆ. ಇದನ್ನು ನಾನು ಮುಕ್ತವಾಗಿ ಒಪ್ಪಿಕೊಳ್ಳುತ್ತೇನೆ ಎಂದರು.
ಇನ್ನು ಈಗ ಗ್ರಾಮಾಂತರ ಪ್ರದೇಶಗಳಲ್ಲೂ ಕೊರೊನಾ ಹರಡಿದೆ. ಪಂಚಸೂತ್ರ ಯೋಜನೆ ಮೂಲಕ ಸೋಂಕು ನಿಯಂತ್ರಣಕ್ಕೆ ನಾವು ಕ್ರಮಕೈಗೊಂಡಿದ್ದೇವೆ.
ಕೊರೊನಾ ದೃಢಪಟ್ಟ ಬಳಿಕ ಕೋವಿಡ್ ಸೆಂಟರ್‍ಗೆ ಬರುವುದು ಕಡ್ಡಾಯ, ಒಂದು ವೇಳೆ ಬರದಿದ್ದರೆ ನಾವೇ ಬಲವಂತವಾಗಿ ಕೋವಿಡ್ ಸೆಂಟರ್‍ಗೆ ಕರೆತರುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಜಿಲ್ಲೆಯಲ್ಲಿ ಹೋಂ ಐಸೋಲೇಷನ್ ಅನ್ನು ಕಡ್ಡಾಯವಾಗಿ ರದ್ದು ಮಾಡುತ್ತೇವೆ.
ಯಾರೇ ಆದರೂ ಸೋಂಕು ದೃಢಪಟ್ಟ ಬಳಿಕ ಕಡ್ಡಾಯವಾಗಿ ಆಸ್ಪತ್ರೆಗೆ ಬರಬೇಕು ಅಥವಾ ಕೋವಿಡ್ ಸೆಂಟರ್‍ಗೆ ಹೋಗಬೇಕು.
ಇನ್ಮುಂದೆ ಯಾರೂ ಕೂಡಾ ಯಾವುದೇ ವಿನಾಯಿತಿ ಕೋರುವಂತಿಲ್ಲ ಎಂದು ತಿಳಿಸಿದರು.










