ಸಿಪಿಎಲ್ 2020- ಬಾರ್ಬೊಡಸ್ ವಿರುದ್ಧ ಮೂರು ರನ್ ಗಳಿಂದ ಜಯ ಸಾಧಿಸಿದ ಸೇಂಟ್ ಲೂಸಿಯಾ
2020ರ ಸಿಪಿಎಲ್ ಟೂರ್ನಿಯ 19 ನೇ ಪಂದ್ಯದಲ್ಲಿ ಸೇಂಟ್ ಲೂಸಿಯಾ ಝೌಕ್ಸ್ ತಂಡ ಮೂರು ರನ್ ಗಳಿಂದ ಬಾರ್ಬೊಡಸ್ ಟ್ರಿಡೆಂಟ್ಸ್ ತಂಡವನ್ನು ಪರಾಭವಗೊಳಿಸಿದೆ. ಟಾಸ್ ಗೆದ್ದ ಬಾರ್ಬೊಡಸ್ ತಂಡ ಮೊದಲು ಸೇಂಟ್ ಲೂಸಿಯಾ ಝೌಕ್ಸ್ ತಂಡವನ್ನು ಬ್ಯಾಟಿಂಗ್‍ಗೆ ಆಹ್ವಾನ ನೀಡಿತ್ತು. ಹೇಡನ್ ವಾಲ್ಶ್ ಅವರ ಮಾರಕ ದಾಳಿಗೆ ನಲುಗಿದ ಸೇಂಟ್ ಲೂಸಿಯಾ ಝೌಕ್ಸ್ ತಂಡ 18 ಓವರ್ ಗಳಲ್ಲಿ 92 ರನ್ ಗಳಿಗೆ ತನ್ನೆಲ್ಲಾ ವಿಕೆಟ್‍ಗಳನ್ನು ಕಳೆದುಕೊಂಡಿತ್ತು. ಸೇಂಟ್ ಲೂಸಿಯಾ ಝೌಕ್ಸ್ ತಂಡದ ಪರ ನಜಿಬುಲ್ಲಾ ಝಾಡ್ರನ್ 22 ರನ್ ಮತ್ತು ಬೌಷರ್ 18 ರನ್ ಗಳಿಸಿದ್ರು. ಇನ್ನುಳಿದ ಬ್ಯಾಟ್ ಮೆನ್ ಗಳು ಒಂದಂಕಿ ಮೊತ್ತಕ್ಕೆ ಸೀಮಿತವಾದ್ರು.
ಸುಲಭ ಗೆಲುವಿನ ಸವಾಲನ್ನು ಬೆನ್ನಟ್ಟಿದ್ದ ಬಾರ್ಬೊಡಸ್ ಟ್ರಿಡೆಂಟ್ಸ್ ತಂಡಕ್ಕೆ ಸೇಂಟ್ ಲೂಸಿಯಾ ಝೌಕ್ಸ್ ಬೌಲರ್‍ಗಳು ಶಿಸ್ತು ಬದ್ಧ ದಾಳಿಯ ಮೂಲಕ ದಿಟ್ಟ ಉತ್ತರವನ್ನೇ ನೀಡಿದ್ರು. ಸೇಂಟ್ ಲೂಸಿಯಾ ತಂಡದ ಲಯಬದ್ಧವಾದ ಬೌಲಿಂಗ್ ಮುಂದೆ ಬಾರ್ಬೊಡಸ್ ತಂಡದ ಬ್ಯಾಟ್ಸ್ ಮೆನ್ ಗಳು ರನ್ ಗಳಿಸಲು ಒದ್ದಾಟ ನಡೆಸಿದ್ರು. ಆರಂಭಿಕ ಚಾಲ್ರ್ಸ್ ಅವರು ಆಕರ್ಷಕ 39 ರನ್ ಗಳಿಸಿದ್ರೂ ತಂಡವನ್ನು ಗೆಲುವಿನ ದಡ ಸೇರಿಸಲು ವಿಫಲರಾದ್ರು. ಅಂತಿಮವಾಗಿ ಬಾರ್ಬೊಡಸ್ ತಂಡ ನಿಗದಿತ 20 ಓವರ್ ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 89 ರನ್ ಗಳಿಸಲಷ್ಟೇ ಶಕ್ತವಾಯ್ತು. ಪರಿಣಾಮ ಸೇಂಟ್ ಲೂಸಿಯಾ ತಂಡ ಮೂರು ರನ್ ಗಳ ರೋಚಕ ಜಯ ಸಾಧಿಸಿತ್ತು. ಈ ಮೂಲಕ ಟೂರ್ನಿಯಲ್ಲಿ ಸೇಂಟ್ ಲೂಸಿಯಾ ತಂಡ ಐದನೇ ಗೆಲುವು ಸಾಧಿಸಿತ್ತು. ಏಳು ಪಂದ್ಯಗಳನ್ನು ಆಡಿರುವ ಸೇಂಟ್ ಲೂಸಿಯಾ ತಂಡ ಐದು ಗೆಲುವು ಮತ್ತು ಎರಡು ಪಂದ್ಯಗಳನ್ನು ಸೋತು ಒಟ್ಟು ಹತ್ತು ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನ ಕಾಯ್ದುಕೊಂಡಿದೆ.
ಇನ್ನು ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡಿರುವ ಬಾರ್ಬೊಡಸ್ ತಂಡ ಆಡಿರುವ ಏಳು ಪಂದ್ಯಗಳಲ್ಲಿ ಐದು ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಎರಡು ಪಂದ್ಯಗಳಲ್ಲಿ ಮಾತ್ರ ಜಯ ಸಾಧಿಸಿದೆ. ಒಟ್ಟು ನಾಲ್ಕು ಅಂಕ ಪಡೆದಿರುವ ಬಾರ್ಬೊಡಸ್ ತಂಡ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ.