ಸೈನಿಕರ ಜೀವ ಮುಖ್ಯ… ಕ್ರಿಕೆಟ್ ಅಲ್ಲ – ಗೌತಮ್ ಗಂಭೀರ್
ನಮಗೆ ಸೈನಿಕರ ಜೀವ ಮುಖ್ಯ. ಸೈನಿಕರ ಜೀವದ ಮುಂದೆ ಕ್ರಿಕೆಟ್ ಆಟ ಏನು ಅಲ್ಲ ಎಂದು ಬಿಜೆಪಿ ಸಂಸದ ಹಾಗೂ ಟೀಮ್ ಇಂಡಿಯಾದ ಮಾಜಿ ಆಟಗಾರ ಗೌತಮ್ ಗಂಭೀರ್ ಹೇಳಿದ್ದಾರೆ.
ಪಾಕ್ ಜೊತೆಗೆ ದ್ವಿಪಕ್ಷೀಯ ಸರಣಿ ನಡೆಸುವ ವಿಚಾರವಾಗಿ ಮಾತನಾಡಿದ ಗೌತಮ್ ಗಂಭೀರ್, ಗಡಿಯಲ್ಲಿ ಭಯೋತ್ಪಾದನೆ ನಿಲ್ಲುವ ತನಕ ಪಾಕ್ ಜೊತೆಗೆ ಯಾವುದೇ ಸಂಬಂಧ ನಡೆಸುವುದು ಸೂಕ್ತವಲ್ಲ. ಗಡಿಯಲ್ಲಿ ಭಯೋತ್ಪಾದನೆ ಇನ್ನೂ ನಿಂತಿಲ್ಲ. ನಮಗೆ ನಮ್ಮ ಸೈನಿಕರ ಜೀವ ಮುಖ್ಯ. ಸೈನಿಕರ ಜೀವದ ಮುಂದೆ ಯಾವುದು ಕೂಡ ದೊಡ್ಡದಲ್ಲ. ಭಯೋತ್ಪಾದನೆ ನಿಲ್ಲುವ ತನಕ ಪಾಕ್ ಜೊತೆಗೆ ಯಾವುದೇ ಭಾಂಧವ್ಯ ನಡೆಸುವುದು ಸರಿಯಲ್ಲ ಎಂದು ಗಂಭೀರ್ ಹೇಳಿದ್ದಾರೆ.
2013ರ ನಂತರ ಭಾರತ ಮತ್ತು ಪಾಕಿಸ್ತಾನ ನಡುವೆ ದ್ವಿಪಕ್ಷೀಯ ಸರಣಿ ನಡೆದಿಲ್ಲ. ಆದ್ರೆ ಐಸಿಸಿಯ ಪಂದ್ಯಗಳಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಿದ್ದವು.
ಇನ್ನು ಈ ಬಾರಿಯ ಟಿ-ಟ್ವೆಂಟಿ ವಿಶ್ವ ಕಪ್ ಟೂರ್ನಿಯಲ್ಲಿ ಪಾಕಿಸ್ತಾನ ಭಾಗಿಯಾಗೋದು ಕೂಡ ಅನುಮಾನವಾಗಿದೆ. ಸದ್ಯದ ಸ್ಥಿತಿಯಲ್ಲಿ ಪಾಕ್ ತಂಡ ಭಾರತದಲ್ಲಿ ಆಡುತ್ತಾ ? ಅದಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡುತ್ತಾ ? ಹೀಗೆ ಹಲವು ಪ್ರಶ್ನೆಗಳು ಮುಂದಿವೆ.
ಈ ನಡುವೆ ಗೌತಮ್ ಗಂಭೀರ್ ಅವರ ಹೇಳಿಕೆ ಹೆಚ್ಚು ಮಹತ್ವ ಪಡೆದುಕೊಂಡಿದೆ. ಈ ನಡುವೆ ಬಿಸಿಸಿಐ ಪಾಕ್ ತಂಡದ ಭಾರತದಲ್ಲಿ ಆಡುವ ನಿರ್ಧಾರವನ್ನು ಕೇಂದ್ರ ಸರ್ಕಾರ ನಿರ್ಧರಿಸಲಿದೆ ಎಂದು ಹೇಳಿದೆ.
ಇನ್ನೊಂದೆಡೆ ಪಾಕ್ ಕ್ರಿಕೆಟ್ ಮಂಡಳಿ ಈಗಾಗಲೇ ಪಾಕ್ ತಂಡಕ್ಕೆ ಮತ್ತು ಪ್ರೇಕ್ಷಕರಿಗೆ ವೀಸಾ ನೀಡುವ ಬಗ್ಗೆಯೂ ಪ್ರಸ್ತಾಪ ಮಾಡಿದೆ. ಹಾಗೇ ಭಾರತದಲ್ಲಿ ಆಡಲ್ಲ ಎಂದು ಕೂಡ ಪಿಸಿಬಿ ಹೇಳಿದೆ. ಹೀಗಾಗಿ ಐಸಿಸಿ ವಿಶ್ವಕಪ್ ಟೂರ್ನಿಯನ್ನು ಭಾರತದ ಬದಲು ಬೇರೆ ರಾಷ್ಟ್ರದಲ್ಲಿ ನಡೆಸುತ್ತಾ ? ಅದಕ್ಕೆ ಬಿಸಿಸಿಐ ಒಪ್ಪಿಗೆ ಕೊಡುತ್ತಾ ? ಪಾಕ್ ತಂಡದ ವಿಚಾರವಾಗಿ ಬಿಸಿಸಿಐ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿಯನ್ನು ಸ್ಥಳಾಂತರ ಮಾಡಲು ಒಪ್ಪಿಗೆ ನೀಡುತ್ತಾ ಅನ್ನೋದು ಈಗ ಪ್ರಶ್ನೆಯಾಗಿ ಕಾಡುತ್ತಿದೆ.