ಅಂತರ್ಜಾತಿ ವಿವಾಹವಾಗಿದ್ದ ಜೋಡಿಯ ಕತ್ತು ಸೀಳಿ ಬರ್ಬರ ಹತ್ಯೆ
ಚಂಡೀಗಢ : ಮನೆಯರ ವಿರೋಧದ ನಡುವೆ ಓಡಿ ಹೋಗಿ ವಿವಾಹವಾಗಿದ್ದ ನವ ಜೋಡಿಯ ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಲಾಗಿರುವ ಘಟನೆ ಪಂಜಾಬ್ ನ ಫಜಿಲ್ಕಾ ಜಿಲ್ಲೆಯ ಸಪ್ಪನ್ ವಾಲಿ ಗ್ರಾಮದಲ್ಲಿ ನಡೆದಿದೆ. 25 ವರ್ಷದ ರೋಹ್ತಾಶ್ ಕುಮಾರ್ , 23 ವರ್ಷದ ಸುಮನ್ ಮೃತ ದಂಪತಿಯಾಗಿದ್ದಾರೆ. ಹತ್ಯೆಗೀಡಾದ ವ್ಯಕ್ತಿ ಪರಿಶಿಷ್ಟ ಜಾತಿಗೆ ಸೇರಿದವನಾಗಿದ್ದು, ಯುವತಿ ಇತರ ಹಿಂದುಳಿದ ವರ್ಗಕ್ಕೆ ಸೇರಿದವಳು. ಇಬ್ಬರೂ ಕೂಡಾ ಫಾಝಿಲ್ಕಾ ಜಿಲ್ಲೆಯ ಅಬೋಹರ್ ನ ಸಪ್ಪನ್ ವಾಲಿ ಗ್ರಾಮದವರಾಗಿದ್ದಾರೆ.
ಯುವಕನ ಕುಟುಂಬಸ್ಥರು ಯುವತಿಯ ಕುಟುಂಬಸ್ಥರ ವಿರುದ್ಧ ಮರ್ಯಾದಾ ಹತ್ಯೆ ಪ್ರಕರಣ ದಾಖಲು ಮಾಡಿದ್ದಾರೆ. ಅಲ್ಲದೇ ಪ್ರಕರಣ ದಾಖಲು ಮಾಡುವವರೆಗೂ ಮರಣೋತ್ತರ ಪರೀಕ್ಷೆಗೆ ಯುವಕನ ಕುಟುಂಬಸ್ಥರು ಒಪ್ಪಿಗೆ ನೀಡಿರಲಿಲ್ಲ. ಈ ಇಬ್ಬರನ್ನೂ ಯುವಕನ ಸಹೋದರಿಯ ಮನೆಯಿಂದ ಅಪಹರಿಸಿ ಕೊಲೆ ಮಾಡಿರೋದಾಗಿ ಮೃತ ಯುವಕನ ಭಾವ ದೂರು ಸಲ್ಲಿಸಿದ್ದಾರೆ. ಯುವತಿಯ ಮನೆಯವರ ವಿರೋಧದ ನಡುವೆ ಈ ಜೋಡಿಯು ಚಂಡೀಗಢ ನ್ಯಾಯಾಲಯದಲ್ಲಿ ಅ.1ರಂದು ರಿಜಿಸ್ಟರ್ ಮ್ಯಾರೇಜ್ ಆಗಿದ್ದರು. ಬಳಿಕ ಈ ಜೋಡಿ ಯುವಕನ ಸಹೋದರಿಯ ಮನೆಗೆ ತೆರಳಿತ್ತು. ಇವರ ಚಲನಚಲಗಳ ಮೇಲೆ ಕಣ್ಣಿಟ್ಟಿದ್ದ ಯುವತಿ ಕುಟುಂಬದವರು ಹತ್ಯೆಗೆ ಪಿತೂರಿ ಮಾಡಿದ್ದರು ಎಂದು ಆರೋಪಿಸಲಾಗಿದೆ. ಭಾನುವಾರ 16 ಮಂದಿಯ ಗುಂಪು ಯುವಕನ ಸಹೋದರಿಯ ಮನೆಗೆ ನುಗ್ಗಿ ದಂಪತಿಯನ್ನು ಅಪಹರಿಸಿ ನಂತರ ಕೊಲೆ ಮಾಡಲಾಗಿದೆ.