ಬಳ್ಳಾರಿ ; ಆರೋಗ್ಯ ಸಚಿವ ಬಿ.ಶ್ರೀ ರಾಮುಲು ಅವರು ಇಂದು ಬಳ್ಳಾರಿಯ ಸಮರ್ಥನಂ ಸಂಸ್ಥೆ ಏರ್ಪಡಿಸಿದ್ದ ಕೊರೊನಾ ವಾರಿಯರ್ಸ್ ಗೆ ಉಚಿತ ಮಾಸ್ಕ್, ಸ್ಯಾನಿಟೈಸರ್ ಹಂಚುವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ವಿರೋಧ ಪಕ್ಷಗಳ ಟೀಕೆ-ಆರೋಪಗಳ ಬಗ್ಗೆ ಮಾತನಾಡಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್, ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಮುಗಿಬಿದ್ದರು.
ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಪುಕ್ಕಟೆ ಪ್ರಚಾರಕ್ಕಾಗಿ ಸರ್ಕಾರ ಮತ್ತು ಸಚಿವರುಗಳನ್ನು ಟೀಕೆ ಮಾಡಿ ಆತ್ಮಸ್ಥೆರ್ಯವನ್ನು ಕದಡುತ್ತಿದ್ದಾರೆ. ಕರ್ನಾಟಕ ಸರ್ಕಾರ `ಕೋವಿಡ್-19′ ಅನ್ನು ಸಮರ್ಥವಾಗಿ ನಿರ್ವಹಿಸುತ್ತಿದೆ. ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೇ ಕರ್ನಾಟಕದ ಸ್ಥಿತಿ ಉತ್ತಮವಾಗಿದೆ. ಜನರು ಸರ್ಕಾರದ ಎಲ್ಲಾ ಶ್ರಮವನ್ನು, ಬದ್ಧತೆಯನ್ನು ಮತ್ತು ಕೆಲಸಗಳನ್ನು ಮೆಚ್ಚಿಕೊಂಡಿದ್ದಾರೆ. ವಿರೋಧ ಪಕ್ಷವಾಗಿ ಕಾಂಗ್ರೆಸ್ಸಿನ ಮುಖಂಡರು ಅನಗತ್ಯವಾಗಿ ಟೀಕೆ ಮಾಡುತ್ತಿದ್ದಾರೆ ಎಂದು ಗುಡುಗಿದರು.
ಇದೇ ವೇಳೆ ಆಶಾ ಕಾರ್ಯಕರ್ತೆಯರ ಪ್ರತಿಭಟನೆ ಬಗ್ಗೆ ಮಾತನಾಡಿದ ಆರೋಗ್ಯ ಸಚಿವರು, ಆಶಾ ಕಾರ್ಯಕರ್ತೆಯರು ಪ್ರಸ್ತುತ ಹಮ್ಮಿಕೊಂಡಿರುವ ಪ್ರತಿಭಟನೆಯನ್ನು ಕೈಬಿಡಬೇಕು ಎಂದು ಮನವಿ ಮಾಡಿಕೊಂಡರು. ಹಾಗೇ ಆಶಾ ಕಾರ್ಯಕರ್ತೆಯರು ಈಗ ಕರ್ತವ್ಯಕ್ಕೆ ಹಾಜರಾಗಿ, ಕೊರೊನಾ ಮುಗಿದ ಮೇಲೆ ತಮ್ಮ ಬೇಡಿಕೆಗಳನ್ನು ಸರ್ಕಾರಕ್ಕೆ ಮಂಡಿಸುವುದು ಸಮಂಜಸ ಎಂದು ಸಲಹೆ ನೀಡಿದರು.








