ರಾಯಚೂರು: ರಾಜ್ಯದ ಹಲವೆಡೆ ವ್ಯಾಪಕವಾಗಿ ಮಳೆಯಾಗುತ್ತಿದ್ದು, ಮೊಸಳೆಗಳು ದಡದತ್ತ ಮುಖ ಮಾಡುತ್ತಿವೆ. ಹೀಗಾಗಿ ನದಿ ದಡದಲ್ಲಿ ಕೃಷಿ ಮಾಡುವ ರೈತರು ಸೇರಿದಂತೆ ಮಕ್ಕಳು, ವೃದ್ಧರು ಆತಂಕದಲ್ಲಿಯೇ ಬದುಕುವಂತಾಗಿದೆ.
ಮಹಾರಾಷ್ಟ್ರ ಸೇರಿದಂತೆ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಮಳೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆಲಮಟ್ಟಿ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡಲಾಗುತ್ತಿದೆ. ಅಲ್ಲದೇ, ಯಾದಗಿರಿಯ ಬಸವಸಾಗರ ಜಲಾಶಯಕ್ಕೆ ನೀರು ಬಿಡಲಾಗಿದೆ. ಹೀಗಾಗಿ ಲಿಂಗಸುಗೂರು, ದೇವದುರ್ಗ ಹಾಗೂ ರಾಯಚೂರು ತಾಲ್ಲೂಕಿನಲ್ಲಿ ಅಲರ್ಟ್ ಘೋಷಿಸಲಾಗಿದೆ. ಇದರ ಬೆನ್ನಲ್ಲಿಯೇ ತಾಲ್ಲೂಕಿನ ಆತ್ಕೂರು ಗ್ರಾಮದ ಕೃಷ್ಣಾ ನದಿ ತೀರದಲ್ಲಿ 20ಕ್ಕೂ ಹೆಚ್ಚು ಮೊಸಳೆಗಳ ದಂಡು ಒಂದೇ ಕಡೆ ಕಂಡು ಬಂದಿದ್ದು, ನದಿಯ ಬಳಿ ಹೋಗದಂತೆ ಜನರಿಗೆ ಎಚ್ಚರಿಕೆ ನೀಡಲಾಗಿದೆ.








