ನವದೆಹಲಿ: ಆಪ್ ಸರ್ಕಾರವನ್ನು ಕೆಡವಲು ಸಂಚು ರೂಪಿಸಿರುವ ಬಿಜೆಪಿ ನಾಯಕರು 7 ಆಮ್ ಆದ್ಮಿ ಪಕ್ಷದ ಶಾಸಕರನ್ನ (AAP MLAs) ಖರೀದಿಸಲು ಕೋಟಿ ಕೋಟಿ ಆಫರ್ ನೀಡಿದೆ ಎಂದು ಆರೋಪಿಸಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಗೆ ದೆಹಲಿ ಪೊಲೀಸರ ಅಪರಾಧ ವಿಭಾಗ ನೋಟಿಸ್ ನೀಡಿದೆ ಎಂದು ತಿಳಿದು ಬಂದಿದೆ.
7 ಶಾಸಕರಿಗೆ ಬಿಜೆಪಿ ತಲಾ 25 ಕೋಟಿ ರೂ. ಆಫರ್ ನೀಡಿದೆ ಎಂದು ಆರೋಪಿಸಿರುವ ಕೇಜ್ರಿವಾಲ್ ನಿವಾಸಕ್ಕೆ ಭೇಟಿ ನೀಡಿದ ದೆಹಲಿ ಪೊಲೀಸರ ಕ್ರೈಂ ಬ್ರ್ಯಾಂಚ್ ತಂಡ ನೋಟಿಸ್ ನೀಡಿದೆ ಎನ್ನಲಾಗಿದೆ. ಆದರೆ, ಸಿಎಂ ಕಚೇರಿ ವಿಭಾಗದ ಅಧಿಕಾರಿಗಳು ಮಾತ್ರ ನೋಟಿಸ್ ಬಂದಿಲ್ಲ ಎಂದು ಹೇಳಿದ್ದಾರೆ. ಸಿಎಂ ಆರೋಪದ ವಿರುದ್ಧ ದೆಹಲಿ ಬಿಜೆಪಿ ನಿಯೋಗವು ಅಪರಾಧ ವಿಭಾಗಕ್ಕೆ ದೂರು ನೀಡಿತ್ತು. ವಿಶೇಷ ತನಿಖಾ ತಂಡದಿಂದ (ಎಸ್ಐಟಿ) ತನಿಖೆ ನಡೆಸುವಂತೆ ಬಿಜೆಪಿ ನಿಯೋಗ ಮನವಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರ ಕ್ರೈಂ ಬ್ರ್ಯಾಂಚ್ ತಂಡ ಇಂದು ಕೇಜ್ರಿವಾಲ್ ಅವರ ನಿವಾದಕ್ಕೆ ಭೇಟಿ ನೀಡಿ ನೋಟಿಸ್ ನೀಡಿರುವುದಾಗಿ ತಿಳಿದು ಬಂದಿದೆ.
ದೆಹಲಿಯ ಆಪ್ ಸರ್ಕಾರ ಉರುಳಿಸುತ್ತೇವೆ. ಈಗಾಗಲೇ 21 ಶಾಸಕರೊಟ್ಟಿಗೆ ಮಾತುಕತೆ ನಡೆಸಿದ್ದೇವೆ. ನೀವೂ ಬಂದುಬಿಡಿ, ಪ್ರತಿಯೊಬ್ಬರಿಗೆ ತಲಾ 25 ಕೋಟಿ ರೂ. ನೀಡುತ್ತೇವೆ ಎಂದು ಆಮಿಷ ಒಡ್ಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.