ಸಿಎಸ್ ಕೆ ಗೆ ಕಾಸ್ಟ್ಲೀ ಆಘಾತ – ಐಪಿಎಲ್ ನಿಂದ ದೀಪಕ್ ಚಾಹರ್ ಔಟ್..?
15ನೇ ಆವೃತ್ತಿಯ ಐಪಿಎಲ್ ಟೂರ್ನಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಅಷ್ಟೊಂದು ಫಲಪ್ರದವಾಗುತ್ತಿಲ್ಲ. ತಂಡಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಹಿನ್ನಡೆ ಅನುಭವಿಸುತ್ತಿದೆ. ಸಿಎಸ್ ಕೆ ತಂಡದ ಗ್ರಹಚಾರ ಸಧ್ಯಕ್ಕೆ ಸರಿ ಇಲ್ಲ. ಟೂರ್ನಿ ಆರಂಭಕ್ಕೆ ಮುನ್ನವೇ ಮಹೇಂದ್ರ ಸಿಂಗ್ ಧೋನಿ ನಾಯಕತ್ವವನ್ನು ತ್ಯಜಿಸಿದ್ದರು. ಹಾಗೇ ತಂಡದ ಪ್ರಮುಖ ಬೌಲರ್ ದೀಪಕ್ ಚಾಹರ್ ಗಾಯದಿಂದ ಚೇತರಿಸಿಕೊಳ್ಳಲಿಲ್ಲ. ಭರವಸೆಯ ಆರಂಭಿಕ ರುತುರಾಜ್ ಗಾಯಕ್ವಾಡ್ ಫಾರ್ಮ್ ಕಳೆದುಕೊಂಡಿದ್ದಾರೆ. ಹಿರಿಯ ಆಟಗಾರರಿಗೆ ಮ್ಯಾಚ್ ಗೆಲ್ಲಿಸಿಕೊಡೋಕೆ ಆಗುತ್ತಿಲ್ಲ. ನೂತನ ನಾಯಕ ರವೀಂದ್ರ ಜಡೇಜಾ ಒತ್ತಡಕ್ಕೆ ಸಿಲುಕಿದ್ದಾರೆ. ಚಾಣಕ್ಯ ಲೀಡರ್ ಮಹೇಂದ್ರ ಸಿಂಗ್ ಧೋನಿಯ ಮ್ಯಾಜಿಕ್ ಕೂಡ ವರ್ಕ್ ಔಟ್ ಆಗುತ್ತಿಲ್ಲ.
ಪರಿಣಾಮ ಸಿಎಸ್ ಕೆ ತಂಡ ಸಾಲು ಸಾಲು ನಾಲ್ಕು ಪಂದ್ಯಗಳನ್ನು ಸೋತಿದೆ. ಇದೀಗ ಐದನೇ ಪಂದ್ಯವನ್ನು ಆರ್ ಸಿಬಿ ವಿರುದ್ಧ ಆಡಲಿದೆ. ಅದರ ಬೆನ್ನಲ್ಲೇ ಮತ್ತೊಂದು ಶಾಕಿಂಗ್ ಸುದ್ದಿಯೂ ಹೊರಬಿದ್ದಿದೆ.
ನಿಜ, ಟೀಮ್ ಇಂಡಿಯಾದ ಸ್ಟಾರ್ ಬೌಲರ್ ಹಾಗೂ ಸಿಎಸ್ ಕೆ ತಂಡದ ಟ್ರಂಪ್ ಕಾರ್ಡ್ ದೀಪಕ್ ಚಾಹರ್ ಮತ್ತೊಂದು ಗಾಯಕ್ಕೆ ತುತ್ತಾಗಿದ್ದಾರೆ.
ಈಗಾಗಲೇ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದೀಪಕ್ ಚಾಹರ್ ಚೇತರಿಕೆ ಪಡೆದುಕೊಳ್ಳುತ್ತಿದ್ದರು. ಇನ್ನೇನೂ ಕೆಲವೇ ದಿನಗಳಲ್ಲಿ ಸಿಎಸ್ ಕೆ ತಂಡವನ್ನು ಸೇರಿಕೊಳ್ಳುತ್ತಾರೆ ಅನ್ನೋ ನಂಬಿಕೆಯಲ್ಲೂ ಇದ್ರು. ಆದ್ರೆ ಈಗ ದೀಪಕ್ ಚಾಹರ್ ಅವರಿಗೆ ಬೆನ್ನು ನೋವು ಕಾಣಿಸಿಕೊಂಡಿದೆ. ಹೀಗಾಗಿ ಈ ಬಾರಿಯ ಐಪಿಎಲ್ ನಲ್ಲಿ ಆಡುವುದು ಅನುಮಾನವಾಗಿದೆ.
ಈ ಹಿಂದೆ ಕೂಡ ದೀಪಕ್ ಚಾಹರ್ ಅವರು ಬೆನ್ನು ನೋವಿನಿಂದ ಬಳಲುತ್ತಿದ್ದರು. ಇದೀಗ ಮತ್ತೆ ಬೆನ್ನು ನೋವು ಕಾಣಿಸಿಕೊಂಡಿರುವುದು ಚಿಂತೆಯನ್ನುಂಟು ಮಾಡಿದೆ. ಹಾಗಂತ ಇದು ಕೇವಲ ಸಿಎಸ್ ಕೆ ಮಾತ್ರ ಹಿನ್ನಡೆಯಲ್ಲ. ಟೀಮ್ ಇಂಡಿಯಾಗೂ ಹಿನ್ನಡೆಯಾಗಬಹುದು.
ಐಪಿಎಲ್ ನಂತರ ಟಿ-20 ವಿಶ್ವಕಪ್ ಟೂರ್ನಿ ನಡೆಯಲಿದೆ. ಟೀಮ್ ಇಂಡಿಯಾದ ಬೌಲಿಂಗ್ ಅಸ್ತ್ರವಾಗಿರುವ ದೀಪಕ್ ಚಾಹರ್ ಗಾಯದಿಂದ ಆದಷ್ಟು ಬೇಗ ಗುಣಮುಖರಾಗಲಿ. ಐಪಿಎಲ್ ನಲ್ಲಿ ಆಡದಿದ್ರೂ ವಿಶ್ವಕಪ್ ನಲ್ಲಿ ಆಡುವುದು ಮುಖ್ಯವಾಗಿದೆ. ಹೀಗಾಗಿ ಇನ್ನೂ ಕೆಲವು ದಿನಗಳ ಕಾಲ ದೀಪಕ್ ಚಾಹರ್ ಅವರು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಚಿಕಿತ್ಸೆ ಪಡೆದುಕೊಳ್ಳಲಿದ್ದಾರೆ.
ಒಟ್ಟಿನಲ್ಲಿ ದೀಪಕ್ ಚಾಹರ್ ಅವರ ಅನುಪಸ್ಥಿತಿ ಸಿಎಸ್ ಕೆ ತಂಡವನ್ನು ಗಾಢವಾಗಿ ಕಾಡುತ್ತಿದೆ. ಸಾಲು ಸಾಲು ಸೋಲುಗಳ ಜೊತೆಗೆ ದೀಪಕ್ ಚಾಹರ್ ಅವರ ಗಾಯದ ಸಮಸ್ಯೆ ಕೂಡ ದೊಡ್ಡ ಚಿಂತೆಯನ್ನುಂಟು ಮಾಡಿದೆ. ದುಬಾರಿ ಮೊತ್ತಕ್ಕೆ ಸಿಎಸ್ ಕೆ ತಂಡ ಚಾಹರ್ ಅವರನ್ನು ಖರೀದಿ ಮಾಡಿತ್ತು. ಗಾಯದಿಂದ ವಾಸಿಯಾಗುತ್ತಾರೆ ಅನ್ನೋ ನಂಬಿಕೆಯಿಂದ ಸಿಎಸ್ ಕೆ ಬದಲಿ ಆಟಗಾರನನ್ನು ಕೂಡ ಆಯ್ಕೆ ಮಾಡಿಕೊಳ್ಳಲಿಲ್ಲ. ಇದು ಕೂಡ ತಂಡದ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತಿದೆ.








