CSK vs RCB Match | ‘ಕಿಂಗ್ಸ್’ ವಿರುದ್ದ ‘ಚಾಲೆಂಜರ್ಸ್’ ಗೆ ಸೂಪರ್ ಗೆಲುವು
ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿದೆ. ಆ ಮೂಲಕ ಪ್ಲೇ ಆಫ್ಸ್ ರೇಸ್ ನಲ್ಲಿ ನಾವಿದ್ದೇವೆ ಎಂದು ಆರ್ ಸಿಬಿ ಸಾರಿದೆ. ಇತ್ತ ಚಾಲೆಂಜರ್ಸ್ ವಿರುದ್ಧ ಸೋತ ಚೆನ್ನೈ ಸೂಪರ್ ಕಿಂಗ್ಸ್ ತಂಡ 15ನೇ ಆವೃತ್ತಿಯಲ್ಲಿ ಇನ್ಮುಂದೆ ಮಾನ ಉಳಿಸಿಕೊಳ್ಳಲು ಹೋರಾಡಬೇಕಿದೆ.
ಪುಣೆಯ ಎಂಸಿಎ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಟಾಸ್ ವಿನ್ ಆಗಿ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಹೀಗಾಗಿ ಟಾಸ್ ಸೋತು ಬ್ಯಾಟಿಂಗ್ ಗೆ ಬಂತ ಬೆಂಗಳೂರು ತಂಡಕ್ಕೆ ಉತ್ತಮ ಆರಂಭ ದೊರೆಯಿತು. ತಂಡದ ಪರ ಇನ್ನಿಂಗ್ಸ್ ಆರಂಭಿಸಿದ ನಾಯಕ ಫಾಫ್ ಡುಪ್ಲೆಸ್ಸಿ 38 ರನ್ ಹಾಗೂ ವಿರಾಟ್ ಕೊಹ್ಲಿ 30 ರನ್ ಗಳಿಸಿ ಉತ್ತಮ ಆಟವಾಡಿದರು. ಅಲ್ಲದೇ ಮೊದಲ ವಿಕೆಟ್ಗೆ 62 ರನ್ಗಳಿಸಿದ ಈ ಜೋಡಿ ಆರ್ಸಿಬಿಗೆ ಭದ್ರಬುನಾದಿ ಹಾಕಿಕೊಟ್ಟರು. ಆದ್ರೆ ನಂತರ ಆರ್ಸಿಬಿ, ಕೇವಲ 17 ರನ್ಗಳ ಅಂತರದಲ್ಲಿ ಪ್ರಮುಖ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಗ್ಲೆನ್ ಮ್ಯಾಕ್ಸ್ವೆಲ್ 3 ರನ್ ಗಳಿಸಿದ್ದಾಗ ಇಲ್ಲದ ರನ್ ಕದಿಯಲು ಹೋಗಿ ಔಟ್ ಆದರು. ಇದರ ಬೆನ್ನಲ್ಲೇ ವಿರಾಟ್ ಕೊಹ್ಲಿ ಸಹ ವಿಕೆಟ್ ಒಪ್ಪಿಸಿ ಹೊರ ನಡೆದರು. ಪರಿಣಾಮ ಆರ್ಸಿಬಿ 9.5 ಓವರ್ಗಳಲ್ಲಿ 79 ರನ್ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಈ ವೇಳೆ ಉತ್ತಮವಾಗಿ ಇನ್ನಿಂಗ್ಸ್ ಕಟ್ಟಿದ ಯುವ ಆಟಗಾರರಾದ ರಜತ್ ಪಟಿದಾರ್ ಮತ್ತು ಮಹಿಪಾಲ್ ಲೋಮ್ರೋರ್ ಚೆನ್ನೈ ದಾಳಿಗೆ ದಿಟ್ಟ ಉತ್ತರ ನೀಡಿದರು. ನಂತರ ಪಟಿದಾರ್ 21 ರನ್ ಹಾಗೂ ಮಹಿಪಾಲ್ ಲೋಮ್ರೋರ್ 42 ರನ್ ಸಿಡಿಸಿ ತಂಡಕ್ಕೆ ನೆರವಾದರು. ಕೊನೆಯಲ್ಲಿ ಬಿರುಸಿನ ಆಟವಾಡಿದ ದಿನೇಶ್ ಕಾರ್ತಿಕ್ 17 ಎಸೆತಗಳ್ಲಿಗೆ 26 ರನ್ ಗಳಿಸಿ ತಂಡದ ಮೊತ್ತ 170ರ ಗಡಿ ದಾಟಿಸಿದರು.
ಆರ್ಸಿಬಿ ನೀಡಿದ 174 ರನ್ಗಳ ಸ್ಪರ್ಧಾತ್ಮಕ ಮೊತ್ತ ಎದುರಿಸಿದ ಸಿಎಸ್ಕೆ ಉತ್ತಮ ಆರಂಭ ಕಂಡಿತು. ಇನ್ನಿಂಗ್ಸ್ ಆರಂಭಿಸಿದ ಋತುರಾಜ್ ಗಾಯಕ್ವಾಡ್ 28 ರನ್ ಹಾಗೂ ಡ್ವೇನ್ ಕಾನ್ವೇ 56 ರನ್ ಸಿಡಿಸಿದರು. ಇವರು ಮೊದಲ ವಿಕೆಟ್ಗೆ 54 ರನ್ಗಳ ಆರಂಭ ನೀಡಿದರು. ನಂತರ ಬಂದ ರಾಬಿನ್ ಉತ್ತಪ್ಪ 1 ರನ್, ಅಂಬಟಿ ರಾಯುಡು 10 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ಈ ವೇಳೆ ಮೊಯಿನ ಅಲಿ 34 ರನ್ ಗಳಿಸಿ ತಂಡಕ್ಕೆ ಚೇತರಿಕೆ ನೀಡಿದ್ರೂ ಯಾವುದೇ ಪ್ರಯೋಜನವಾಗಲಿಲ್ಲ. ಕೊನೆಯಲ್ಲಿ ಜಡೇಜಾ ಮೂರು, ಧೋನಿ ಎರಡು ರನ್, ಪ್ರಿಟೋರಿಯಸ್ 13 ರನ್ ಸಿಡಿಸಿದರು. ಅಂತಿಮವಾಗಿ ಚೆನ್ನೈ ತಂಡ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ಗೆ 160 ರನ್ಗಳಿಸಿತು. ಆ ಮೂಲಕ ಸಿಎಸ್ಕೆ 13 ರನ್ಗಳ ಸೋಲೊಪ್ಪಿಕೊಂಡಿತು.
csk-vs-rcb-match-Royal Challengers Bangalore beat Chennai Super Kings and move into top-four